ತಹಸೀಲ್ದಾರ ಸುಬೇದಾರಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ ಆಳಂದಕ್ಕೆ ನೂತನ ತಹಸೀಲ್ದಾರ ಅಣ್ಣಾರಾವ್ ಪಾಟೀಲಗೆ ಸ್ವಾಗತ
ಆಳಂದ:ಆ.3: ತಾಲೂಕು ತಹಸೀಲ್ದಾರರಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡ ಅಣ್ಣಾರಾವ್ ಪಾಟೀಲರಿಗೆ ಸ್ವಾಗತ ಸನ್ಮಾನ ಮತ್ತು ವರ್ಗಾವಣೆಯಾದ ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರಿಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ ಸಮಾರಂಭ ಪಟ್ಟಣದ ತಾಲೂಕು ಆಡಳಿತಸೌಧ ಸಭಾಂಗಣದಲ್ಲಿ ಕಂದಾಯ ನೌಕರರು ಮತ್ತು ಗ್ರಾಮ ಆಡಳಿತಾಧಿಕಾರಿಗಳ ಸಂಘದ ಆಶ್ರಯದಲ್ಲಿ ನೆರವೇರಿತು.
ವರ್ಗಾವಣೆ ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರು, “ನಾನು ಈ ತಾಲೂಕಿನಲ್ಲಿ ಸೇವೆ ಸಲ್ಲಿಸುವುದಕ್ಕೆ ಅವಕಾಶ ನೀಡಿದ ಸರ್ವರಿಗೂ ಋಣಿಯಾಗಿದ್ದು, ನಮ್ಮೆಲ್ಲರ ಸಹಕಾರದಿಂದ ಮತ್ತು ಶ್ರಮದಿಂದ ಸರ್ಕಾರಿ ಕೆಲಸದ ಒತ್ತಡಗಳ ಮಧ್ಯ ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು. ಈ ಸಂದರ್ಭದಲ್ಲಿ ನಿಮ್ಮ ಸಹಕಾರ ಸದಾ ನನ್ನ ಮನದಲ್ಲಿ ಉಳಿಯುತ್ತದೆ. ಮುಂದೆಯೂ ಸಹ ನೂತನ ತಹಸೀಲ್ದಾರ್ ಅಣ್ಣಾರಾವ್ ಪಾಟೀಲ್ ಅವರಿಗೆ ಸಹಕಾರ ನೀಡಿ, ಅವರು ಈ ತಾಲೂಕಿನ ಅಭಿವೃದ್ಧಿಗೆ ಬಲವಾಗಿ ನಿಲ್ಲಬೇಕೆಂದು ಆಶಿಸುತ್ತೇನೆ. ನಾನು ಎಲ್ಲರಿಗೂ ಶುಭಾಶಯಗಳನ್ನು ಹಾರೈಸುತ್ತೇನೆ ಎಂದು ಹೇಳಿದರು.
ನೂತನ ತಹಸೀಲ್ದಾರ ಅಣ್ಣಾರಾವ್ ಪಾಟೀಲ ಅವರು ಅಧಿಕಾರ ವಹಿಸಿಕೊಂಡು ಸಿಬ್ಬಂದಿಗಳು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿ, “ನಾನು ಈ ಹೊಸ ಜವಾಬ್ದಾರಿಯನ್ನು ಸ್ವೀಕರಿಸುವಾಗ, ನನಗೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ. ನಾನು ನಿಮ್ಮೊಂದಿಗೆ ಕೈಜೋಡಿಸಿ, ಈ ತಾಲೂಕಿನಲ್ಲಿ ಅಭಿವೃದ್ಧಿ ಮತ್ತು ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಬದ್ಧನಾಗಿ ಕೆಲಸ ಮಾಡುತ್ತೇನೆ. ವರ್ಗಾವಣೆಯಾದ ತಹಸೀಲ್ದಾರ ಸುಬೇದಾರ್ ಅವರು ಮಾಡಿರುವ ಉತ್ತಮ ಕೆಲಸಗಳನ್ನು ಮುಂದುವರೆಸಿ, ಈ ತಾಲೂಕಿನ ಜನತೆಗೂ ಮತ್ತು ಆಡಳಿತಕ್ಕೂ ನಾನು ಸದಾ ಲಭ್ಯನಾಗಿರುತ್ತೇನೆ. ನಿಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹದೊಂದಿಗೆ ನಾವು ಇನ್ನಷ್ಟು ಯಶಸ್ವಿಯಾಗೋಣ ಎಂದು ಹೇಳಿದರು.
ವೇದಿಕೆಯಲ್ಲಿ ಗ್ರೇಡ್-2 ತಹಸೀಲ್ದಾರ ಬಿ.ಜಿ. ಕುದರಿ ಉಪಸ್ಥಿತರಿದ್ದರು, ಶಿರಸ್ತೆದಾರ ರಾಕೇಶ ಶೀಲವಂತ, ಗ್ರಾಮ ಆಡಳಿತಾಧಿಕಾರಿ ಸಚೀದಾನಂದ, ಮಂಜುನಾಥ ಮಾತನಾಡಿ ಯಲ್ಲಪ್ಪ ಸುಬೇದಾರ ಸಿಬ್ಬಂದಿಗಳೊಂದಿಗೆ ಆತ್ಮೀಯತೆ ಮತ್ತು ಸರಳತೆಯನ್ನು ತೋರಿಸಿಕೊಂಡಿದ್ದು ಸದಾ ಸ್ಮರಣಿಯಲಿರುತ್ತಾರೆ. ಇದೇ ರೀತಿ ನೂತನ ತಹಸೀಲ್ದಾರ ಅಣ್ಣಾರಾವ್ ಪಾಟೀಲರ ಉತ್ತಮ ಕಾರ್ಯಶೈಲಿಯನ್ನು ಆಶಿಸಿದ್ದೇವೆ ಎಂದರು.
ನಾಗರಿಕ ಮುಖಂಡ ಶಿವುಪುತ್ರಪ್ಪ ಪಾಟೀಲ ಮುನ್ನೊಳ್ಳಿ, ದಯಾನಂದ ಶೇರಿಕಾರ, ಕಸಾಪ ಅಧ್ಯಕ್ಷ ಹಣಮಂತ ಶೇರಿ, ಕರವೇ ಅಧ್ಯಕ್ಷ ಈರಣ್ಣಾ ಜಿ. ಆಳಂದ, ಶಿರಸ್ತೆದಾರ ಮಹೇಶ ಸಜ್ಜನ್, ಆಳಂದ ನಾಡ ತಹಸೀಲ್ದಾರ ಸೈಯದ್ ಫರಿದುಲ್ಲಾ, ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಸಚೀದಾನಂದ ಚಿನ್ಮನಳಿ,ಪ್ರಧಾನ ಕಾರ್ಯದರ್ಶಿ ದತ್ತಾತ್ರೆಯ ರಾಠೋಡ, ಸಂಘದ ಪ್ರಮುಖ ಆನಂದ ಪೂಜಾರಿ, ಕಂದಾಯ ನಿರೀಕ್ಷಕ ಶರಣಬಸಪ್ಪ ಹಕ್ಕಿ, ಅಲ್ಲಾದ್ದೀನ್ ಖಜೂರಿ, ಅನೀಲಕುಮಾರ ವಗ್ಗೀಕರ್, ಎಸ್‍ಡಿಎ ಮಹಾದೇವಪ್ಪ ಬೊಬಡೆ ಸೇರಿದಂತೆ ಮಾದನಹಿಪ್ಪರಗಾ ನಾಡ ತಹಸೀಲ್ದಾರ ಮಲ್ಲಿಕಾರ್ಜುನ ಪಾಟೀಲ, ನಿಂಬರಗಾ ನಾಡತಹಸೀಲ್ದಾರ ಮಹೇಶ ಮತ್ತು ಗ್ರಾಮ ಆಡಳಿತಾಧಿಕಾರಿಗಳು ಕಂದಾಯ ನಿರೀಕ್ಷಕರು ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಗಳು ಅಧಿಕಾರಿಗಳು ಉಬಯ ತಹಸೀಲ್ದಾರರುಗಳಿಗೆ ಸನ್ಮಾನಿಸಿದರು.