ಬೆಂಗಳೂರು-ಮೈಸೂರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಬೀದರನಿಂದ ತೆರಳಿದ ಬಿಜೆಪಿ ಮುಖಂಡರು
ಬೀದರ್:ಆ.3: ಮುಖ್ಯಮಂತ್ರಿ ಸಿದ್ಧರಾಮಯ್ಯ ಕುಟುಂಬ ಈ ಮುಡಾ ಹಗರಣದಲ್ಲಿ ನೇರವಾಗಿ ಭಾಗಿಯಾಗಿದೆ. ಆದ್ದರಿಂದ ಸಿಎಂ ಸಿದ್ಧರಾಮಯ್ಯ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಸಿಬಿಐ ತನಿಖೆಗೆ ಸಹಕರಿಸಬೇಕೆಂದು ಭಾರತೀಯ ಜನತಾ ಪಕ್ಷದ ವಿಭಾಗೀಯ ಪ್ರಭಾರಿ, ಬೀದರ ವಿಧಾನಸಭಾ ಕ್ಷೇತ್ರದ ನಾಯಕ ಈಶ್ವರಸಿಂಗ್ ಠಾಕೂರ್ ಆಗ್ರಹಿಸಿದ್ದಾರೆ. ಮುಡಾ ಹಗರಣದಲ್ಲಿ ಸಿಎಂ ಸಿದ್ಧರಾಮಯ್ಯ ಕುಟುಂಬ ಭಾಗಿಯಾಗಿದೆ ಎಂದು ಆರೋಪಿಸಿ ಬಿಜೆಪಿ ವತಿಯಿಂದ ಆಗಸ್ಟ್ 3 ರಂದು ಬೆಂಗಳೂರಿನಿಂದ ಮೈಸೂರವರೆಗೆ ಜರುಗುವ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಬೀದರನಿಂದ ವಾಹನಗಳ ಮೂಲಕ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಠಾಕೂರ್ ಮಾತನಾಡುತ್ತ ತಿಳಿಸಿದರು. 87 ಕೋಟಿ ಹಗರಣ ಆಗಿದೆ ಎಂದು ಸಿಎಂ ಒಪ್ಪಿಕೊಳ್ಳುತ್ತಾರೆ. ಈ ಹಗರಣದಲ್ಲಿ ಒಬ್ಬ ದಲಿತ ಅಧಿಕಾರಿ ಪ್ರಾಣ ಕಳೆದುಕೊಂಡರು. 14 ನಿವೇಶನಗಳನ್ನು ಪತ್ನಿ ಹೆಸರಿಗೆ ವರ್ಗಾವಣೆಯಾಗಿದೆ. ಹೀಗಾಗಿ ಮುಡಾ ಹಗರಣ ನಡೆದಿದೆ ಎಂದು ಇದರಿಂದ ಸಾಬೀತಾಗಿದೆ. ರಾತ್ರಿ ಹಗಲು ವಿಧಾನಸಭೆಯಲ್ಲಿ ಮೈತ್ರಿ ಸರ್ಕಾರದ ಶಾಸಕರು ಮಾಡಿದ್ದರು. ಅದಕ್ಕೂ ಸರ್ಕಾರ ಬಗ್ಗಲಿಲ್ಲ. ಹೀಗಾಗಿ ಬೆಂಗಳೂರು-ಮೈಸೂರ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಾಗಿದೆ. ಬೀದರ ನಗರದಿಂದ ನೂರು ಜನ, ಇಡೀ ಜಿಲ್ಲೆಯಿಂದ ಏಳು ನೂರು ಜನ ಬಿಜೆಪಿ ಕಾರ್ಯಕರ್ತರು ತೆರಳುತ್ತಿದ್ದೇವೆ. ಆಗಸ್ಟ್ 3 ರಿಂದ 10ರ ವರೆಗೆ ಈ ಪಾದಯಾತ್ರೆ ಜರುಗುತ್ತಿದೆ. ರಾಜ್ಯಪಾಲರ ನೋಟಿಸ್‍ಗೆ ಸಿಎಂ ಅವರು ದಾಖಲಾತಿಗಳನ್ನು ಕೊಡಲೇಬೇಕು. ಪ್ರಕರಣ ಮುಚ್ಚಿ ಹಾಕಲು ಸಚಿವ ಭೈರತಿ ಸುರೇಶ ಅವರು ದಾಖಲಾತಿಗಳನ್ನು ರಾತ್ರೋ ರಾತ್ರಿ ಮೈಸೂರಿನಿಂದ ತೆಗೆದುಕೊಂಡು ಬಂದಿದ್ದು ಖಂಡನೀಯ. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಹಗರಣಗಳ ಸುಳಿಯಲ್ಲಿ ಸಿಲುಕಿದೆ. ಶೀಘ್ರದಲ್ಲೆ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ತೊಲಗಿ ಬಿಜೆಪಿ ಸರ್ಕಾರ ಆಸ್ತಿತ್ವಕ್ಕೆ ಬರುವ ಲಕ್ಷಣಗಳು ಕಂಡಬರುತ್ತಿವೆ ಎಂದು ತಿಳಿಸಿದರು.
ಪಕ್ಷದ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದೀಪಕ ಗಾದಗೆ ಮಾತನಾಡಿ ಮುಡಾ ಹಗರಣ ಕುರಿತು ವಿಧಾನಸಭೆಯಲ್ಲಿ ಚರ್ಚಿಸಲು ಅವಕಾಶ ನೀಡದ ಕಾಂಗ್ರೇಸ್ ಸರ್ಕಾರಕ್ಕೆ ನಮ್ಮ ಧಿಕ್ಕಾರವಿದೆ. ಆದ್ದರಿಂದ ಈ ಕುರಿತು ವಿಧಾನಸಭೆಯಲ್ಲಿ ಚರ್ಚೆಯಾಗಬೇಕು. ಸೂಕ್ತ ಕಾನೂನಿನ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಹೇಳಿದರು.
ಬಿಜೆಪಿ ಪಕ್ಷದ ಗ್ರಾಮಾಂತರ ನಿಕಟಪೂರ್ವ ಮಂಡಲ ಅಧ್ಯಕ್ಷ ರಾಜೇಂದ್ರ ಪೂಜಾರಿ ಮಾತನಾಡಿ ಕಾಂಗ್ರೇಸ್ ಸರ್ಕಾರ ಹಗರಣಗಳ ಮೇಲೆ ಹಗರಣ ಮಾಡಿಕೊಂಡು ಬರುತ್ತಿದೆ. ವಾಲ್ಮಿಕಿ ಹಗರಣ, ಮುಡಾ ಹಗರಣ ಕುರಿತು ವಿಧಾನಸಭೆಯಲ್ಲಿ ಚರ್ಚಿಸಲು ಅವಕಾಶ ನೀಡಿಲ್ಲ. ಮುಡಾ ಹಗರಣ ಕುರಿತು ಬೆಂಗಳುರು ಮೈಸೂರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಪಕ್ಷದ ಗ್ರಾಮಾಂತರ ಮತ್ತು ನಗರ ಮಂಡಲ ಪ್ರಮುಖರು ಕಾರ್ಯಕರ್ತರು ಹೊರಡುತ್ತಿದ್ದೇವೆ. ನಗರದ ಕೆಇಬಿ ಹನುಮಾನ ಮಂದಿರದಲ್ಲಿ ಪೂಜೆಯನ್ನು ಸಲ್ಲಿಸಿ ತೆರಳುತ್ತಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಕಾಂಗ್ರೇಸ್ ಸರ್ಕಾರಕ್ಕೆ ಧಿಕ್ಕಾರ ಕೂಗುತ್ತ, ಚಲೋ ಚಲೋ ಮೈಸೂರ ಚಲೋ ಘೋಷಗಳನ್ನು ಕೂಗುತ್ತ ವಾಹನಗಳ ಮುಖಾಂತರ ತೆರಳಿದರು. ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಪಾಟೀಲ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಸುನೀಲ ಗವಳಿ, ಚಂದ್ರಶೇಖರ ಗಾದಾ, ಶಿವಕುಮಾರ ಸ್ವಾಮಿ, ರಾಜು ಜಮಾದಾರ, ಆನಂದ ಚಿಮಕೋಡ, ಸಂದೀಪ ಚಿಮಕೋಡ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.