ಮುಡಾ, ವಾಲ್ಮೀಕಿ ನಿಗಮ ಹಗರಣಕ್ಕೆ ತಾರ್ಕಿಕ ಅಂತ್ಯ
ಸಂಜೆವಾಣಿ ನ್ಯೂಸ್
ಮೈಸೂರು:ಆ.03:- ಮುಡಾ, ವಾಲ್ಮೀಕಿ ನಿಗಮದ ಹಗರಣ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದೇ ಪಾದಯಾತ್ರೆ ಉದ್ದೇಶ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಕಡೆಯ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಪತ್ನಿ, ಮಗನೊಂದಿಗೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಕೃಷಿ ಚಟುವಟಿಕೆಯಿಂದಾಗಿ ಪಾದಯಾತ್ರೆ ಮುಂದೂಡಲು ಮನವಿ ಮಾಡಲಾಗಿತ್ತು. ಆದರೆ, ಬಿಜೆಪಿ ವರಿಷ್ಠರು ಮುಂದೂಡುವುದು ಸರಿಯಲ್ಲ ಎಂದು ಹೇಳಿದ್ದರಿಂದ ಪಾದಯಾತ್ರೆಗೆ ಒಪ್ಪಿದ್ದೇವೆ. ರಾಜ್ಯದ ಜನರ ಪರವಾಗಿ ಈ ಪಾದಯಾತ್ರೆ ನಡೆಸುತ್ತಿದ್ದೇವೆ. ನಮ್ಮ ಪಾದಯಾತ್ರೆ ಡೈವರ್ಟ್ ಮಾಡಲು ಕಾಂಗ್ರೆಸ್ ಪರ್ಯಾಯ ಸಮಾವೇಶ ಮಾಡುತ್ತಿದೆ ಎಂದರು.
ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರಿಂದ ನೋಟೀಸ್ ಜಾರಿ ಕುರಿತು ಮಾತನಾಡಿ, ಆರ್‍ಟಿಐ ಕಾರ್ಯಕರ್ತರ ದೂರನ್ನು ಆಧರಿಸಿ ನೋಟಿಸ್ ನೀಡಲಾಗಿದೆ. ಆದರೆ, ಸರ್ಕಾರ ರಾಜ್ಯಪಾಲರ ವಿರುದ್ಧವೇ ನಿರ್ಣಯ ಕೈಗೊಂಡಿದೆ. ಇದು ಕಾಂಗ್ರೆಸ್ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಮುಂದೆ ಇದು ಯಾವ ರೀತಿ ಆಗಲಿದೆ ಎಂಬುದನ್ನು ಕಾದು ನೋಡಿ ಎಂದರು.
ವಾಲ್ಮೀಕಿ ನಿಗಮದಲ್ಲಿ ಇತಿಹಾಸದಲ್ಲೇ ಈ ರೀತಿಯ ಹಗರಣ ಯಾವತ್ತೂ ನಡೆದಿರಲಿಲ್ಲ. ಮುಖ್ಯಮಂತ್ರಿಗಳೇ 89 ಕೋಟಿ ಹಗರಣ ನಡೆದಿದೆ ಎಂದು ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಆದರೆ ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿದ್ದಾರೆ. ಅಧಿಕಾರಿಗಳು ಸರ್ಕಾರದ ಕೆಳಗೆ ಕೆಲಸ ಮಾಡುತ್ತಾರೆ. ಹಾಗಾಗಿ ಸರ್ಕಾರವೇ ಇದಕ್ಕೆ ಹೊಣೆ, ಇದರ ವಿರುದ್ಧ ನಮ್ಮ ಹೋರಾಟ ಎಂದರು.
ರಾಮನಗರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಆಸ್ತಿ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಮನಗರದಲ್ಲಿ ನಮ್ಮ ಆಸ್ತಿ ಎಷ್ಟಿದೆ ಎನ್ನುವುದು ಜಾಗಜ್ಜಾಹೀರು. 1985ರಲ್ಲಿ ಕುಮಾರಸ್ವಾಮಿ ಅವರು ಕೇತಗಳ್ಳಿ ಬಳಿ ಜಮೀನು ಖರೀದಿ ಮಾಡಿದ್ದರು. ಸಿನಿಮಾ ವಿತರಣೆಯಲ್ಲಿ ಬಂದಿದ್ದ ಹಣದಲ್ಲಿ ಜಮೀನು ಖರೀದಿ ಮಾಡಿದ್ದಾರೆ. ಇದನ್ನು ಹೊರತುಪಡಿಸಿ ರಾಮನಗರದಲ್ಲಿ ಬೇರೆ ಯಾವುದೇ ಆಸ್ತಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ-ಜೆಡಿಎಸ್ ಭ್ರಷ್ಟಚಾರದ ಪಟ್ಟಿ ಮಾಡಿದ್ದೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಇಷ್ಟು ದಿನ ಕಾಂಗ್ರೆಸ್‍ನವರು ಯಾಕೆ ಸುಮ್ಮನಿದ್ದರು. 2013ರಿಂದ 18ರವರೆಗೆ ಅವರೇ ಅಧಿಕಾರದಲ್ಲಿದ್ದರು. ಆಗ ಯಾಕೆ ಈ ಬಗ್ಗೆ ತನಿಖೆ ನಡೆಸಲಿಲ್ಲ. ಈಗ ಕಾಂಗ್ರೆಸ್‍ನವರು ಭ್ರಷ್ಟಾಚಾರದ ವಿಷಯವನ್ನು ಡೈವರ್ಟ್ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.