ಸಿಎಂ ವಾಲ್ಮೀಕಿ ನಿಗಮ ಹಗರಣದ ಜವಾಬ್ದಾರಿ ಹೊರಲಿ
ಸಂಜೆವಾಣಿ ನ್ಯೂಸ್
ಮೈಸೂರು:ಆ.03:- ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಆಗಿರುವುದನ್ನು ಸಿಎಂ ಸಿದ್ದರಾಮಯ್ಯ ಅವರೇ ಅಧಿವೇಶನದಲ್ಲಿ ಒಪ್ಪಿಕೊಂಡಿದ್ದಾರೆ. ಅಲ್ಲದೆ ಅವರೇ ಹಣಕಾಸು ಸಚಿವರಾಗಿರುವುದರಿಂದ ಹಗರಣದ ಜವಾಬ್ದಾರಿ ಹೊರಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಕಡೆಯ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಣ ತೆಲಂಗಾಣದ ಚುನಾವಣೆಗೆ ಹೋಗಿದೆ. ತೆಲಂಗಾಣದ ಚುನಾವಣೆಗೆ ಹಣ ಕೊಡಲು ಸಿದ್ದರಾಮಯ್ಯಗೆ ಜವಾಬ್ದಾರಿ ನೀಡಿ ಹೈಕಮಾಂಡ್ ಸೂಚನೆ ನೀಡಿತ್ತು. ಇದು ರಾಜ್ಯದ ಬಡವರ, ತೆರಿಗೆ ಹಣ,.ಇದರ ನೇರ ಹೊಣೆ ಸಿಎಂ ಸಿದ್ದರಾಮಯ್ಯ ಹೊರಬೇಕು. ಅವರೇ ಹಣಕಾಸು ಸಚಿವರು, ನಾಗೇಂದ್ರ ನೆಪ ಮಾತ್ರ. ನಾಗೇಂದ್ರ ಹಿಂದಿರುವ ಶಕ್ತಿ ಸಿದ್ದರಾಮಯ್ಯ ಎಂದರು.
ಮುಡಾ ಹಗರಣದ ವಿರುದ್ಧ ಬಿಜೆಪಿ ಪಾದಯಾತ್ರೆ ಕುರಿತು ಮಾತನಾಡಿ, ನಾಳಿನ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದೇನೆ. ಜತೆಗೆ ಅಧಿವೇಶನ ಇರುವ ಕಾರಣ ಹಲವು ಬಿಲ್‍ಗಳ ಮಂಡನೆ ಆಗಬೇಕಿದೆ. ಹಾಗಾಗಿ ಪಾದಯಾತ್ರೆ ಸಮಾವೇಶದಲ್ಲಿ ಭಾಗಿಯಾಗುತ್ತೇವೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಜನಾಂದೋಲನದ ಕುರಿತು ಮಾತನಾಡಿ, ಕೇಂದ್ರ ಬಜೆಟ್‍ನಲ್ಲಿ ಬಿಜೆಪಿ ಸರ್ಕಾರ ಇಲ್ಲದ ರಾಜ್ಯಗಳಿಗೂ ಅನುದಾನ ನೀಡಿದೆ. ಹಾಗೆಯೇ ಕರ್ನಾಟಕದಲ್ಲಿ ರೈಲ್ವೆ, ಹೈವೇಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಅವರು ಅಂಕಿ ಅಂಶ ಇಟ್ಟುಕೊಂಡು ಮಾತನಾಡಲಿ. ನಾನು ಕೂಡ ಅಂಕಿ ಅಂಶಗಳ ಜತೆಗೆ ಉತ್ತರ ನೀಡುತ್ತೇನೆ ಎಂದರು.
ಮೇಕೆದಾಟು ಯೋಜನೆ ಅನುಷ್ಠಾನ ವಿಚಾರ ಕುರಿತು ಪ್ರತಿಕ್ರಿಯಿಸಿ, ಮೊದಲು ನ್ಯಾಯಾಲಯದಲ್ಲಿನ ಸಮಸ್ಯೆ ಇತ್ಯರ್ಥ ಮಾಡಿಕೊಂಡು, ನಂತರ ನಮ್ಮ ಬಳಿಗೆ ಬನ್ನಿ ಎಂದರು.
ಸಂಸತ್ ಅಧಿವೇಶನದ ನಡುವೆಯೂ ಅಧಿದೇವತೆ ಚಾಮುಂಡೇಶ್ವರಿ ದರ್ಶನ ಮಾಡಿದ್ದೇನೆ. ತಾಯಿ ಚಾಮುಂಡೇಶ್ವರಿ ನಾಡಿನ ಶಕ್ತಿ ದೇವತೆ. ಈಗಾಗಲೇ ರಾಜ್ಯದಲ್ಲಿ ಅತಿವೃಷ್ಟಿ ಉಂಟಾಗಿದೆ ಎಂದು ಹೇಳಿದರು.