ರಾಜ್ಯ ಸರ್ಕಾರ ನಿಷ್ಕ್ರಿಯ: ರಾಜೀವ್ ಲೇವಡಿ
ತುರುವೇಕೆರೆ, ಆ. ೩- ರಾಜ್ಯ ಸರ್ಕಾರ ನಿಷ್ಕ್ರಿಯವಾಗಿದ್ದು, ಅದನ್ನು ಎಚ್ಚರಿಸುವ ಸಲುವಾಗಿ ಬಿಜೆಪಿ ಮತ್ತು ಜೆಡಿಎಸ್‌ನಿಂದ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲಾಗುವುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಹೇಳಿದರು.
ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ೧೮೭ ಕೋಟಿ ರೂ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಧಿಕಾರಿಗಳ ಮತ್ತು ಸಚಿವರ ಪಾಲಾಗಿದೆ ಎಂದು ಆರೋಪಿಸಿದರು.
ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ೨೫ ಸಾವಿರ ಕೋಟಿ ದುರ್ಬಳಕೆಯಾಗಿದೆ. ಅತಿವೃಷ್ಠಿಯಿಂದ ಪ್ರವಾಹ ಬಂದಿದ್ದರೂ ಜನರಿಗೆ ಸ್ಪಂದಿಸುತ್ತಿಲ್ಲ. ರಾಜ್ಯದಲ್ಲಿ ರೈತರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರೂ ರೈತರ ಹಿತರಕ್ಷಣೆ ಮಾಡಲು ಹಿಂದೇಟು ಹಾಕುತ್ತಿದೆ. ಹಿಂದುಳಿದ ವರ್ಗಗಳ, ಕಟ್ಟಡ ಕಾರ್ಮಿಕರ ಅಭಿವೃದ್ಧಿಗೆ ಇಟ್ಟಿದ್ದ ಹಣ ದುರುಪಯೋಗವಾಗಿದೆ ಎಂದು ದೂರಿದರು.
ಪಾದಯಾತ್ರೆಗೆ ತುರುವೇಕೆರೆ ವಿಧಾನಸಭಾ ಕ್ಷೇತ್ರದಿಂದ ಎರಡು ಸಾವಿರ ಕಾರ್ಯಕರ್ತರು ರಾಜ್ಯ ಬಿಜೆಪಿ ನಿಗದಿಪಡಿಸಿದ ದಿನದಂದು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಎರಡೂ ಪಕ್ಷಗಳ ಮುಖಂಡರು ಪಾದಯಾತ್ರೆಯ ದಿನಾಂಕವನ್ನು ನಿಗದಿಪಡಿಸಲಿದ್ದಾರೆ ಎಂದರು.
ಸಭೆಯಲ್ಲಿ ಮಾಜಿ ಶಾಸಕರಾದ ಮಸಾಲ ಜಯರಾಂ, ಎಂ.ಡಿ.ಲಕ್ಷ್ಮೀನಾರಾಯಣ್, ಮುಖಂಡರಾದ ಸಾಗರನಹಳ್ಳಿ ವಿಜಯಕುಮಾರ್, ಗಂಗರಾಜ್, ಕೆಂಪೇಗೌಡ, ಅನಿತಾ ನಂಜುಂಡಯ್ಯ, ಹಾಲೇಗೌಡ, ದುಂಡ ರೇಣುಕಯ್ಯ, ಪಟ್ಟಣ ಪಂಚಾಯಿತಿ ಸದಸ್ಯ ಅಂಜನ್‌ಕುಮಾರ್, ಚಂದ್ರಯ್ಯ, ಪ್ರಕಾಶ್, ಬಸವರಾಜು, ಸೋಮಶೇಖರ್, ತಾಲ್ಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಚೂಡಾರತ್ನ, ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷ ಗೌರೀಶ್ ಮತ್ತಿತರರು ಪಾಲ್ಗೊಂಡಿದ್ದರು.