ನಾಮದ ಚಿಲುಮೆ ಜಿಂಕೆವನ ೮ ವರ್ಷಗಳಲ್ಲಿ ೪೩ ಜಿಂಕೆಗಳ ಸಾವು, ೩ ಚಿರತೆಗೆ ಬಲಿ
ತುಮಕೂರು, ಆ. ೩- ತಾಲ್ಲೂಕಿನ ನಾಮದಚಿಲುಮೆಯಲ್ಲಿರುವ ಅರಣ್ಯ ಇಲಾಖೆಯ ಜಿಂಕೆವನದಲ್ಲಿ ೨೦೧೬ ನೇ ಸಾಲಿನಿಂದ ಈವರೆಗಿನ ೮ ವರ್ಷಗಳ ಅವಧಿಯಲ್ಲಿ ಒಟ್ಟು ೪೩ ಜಿಂಕೆಗಳು ಮೃತಪಟ್ಟಿವೆ. ಇದರಲ್ಲಿ ೧೩ ಗಂಡು ಜಿಂಕೆಗಳು, ೨೯ ಹೆಣ್ಣು ಜಿಂಕೆಗಳು ಮತ್ತು ೧ ಮರಿ ಜಿಂಕೆ ಸೇರಿವೆ. ೨೦೧೭ ರಲ್ಲಿ ಒಂದು ಹೆಣ್ಣು ಜಿಂಕೆ, ಒಂದು ಗಂಡು ಜಿಂಕೆ ಮತ್ತು ಒಂದು ಮರಿ ಸೇರಿ ಒಟ್ಟು ಮೂರು ಜಿಂಕೆಗಳು ಚಿರತೆಗೆ ಬಲಿಯಾಗಿವೆ ಎಂಬ ಮಾಹಿತಿ ಲಭಿಸಿದೆ.
ತುಮಕೂರಿನ ಸಾಮಾಜಿಕ ಕಾರ್ಯಕರ್ತ ಆರ್.ವಿಶ್ವನಾಥನ್ ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗೆ ತುಮಕೂರಿನ ವಲಯ ಅರಣ್ಯಾಧಿಕಾರಿಗಳು ನೀಡಿರುವ ಮಾಹಿತಿಯನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಜುಲೈ ೨೪ ರಂದು ರವಾನಿಸಿದ್ದು, ಇದರಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ.
೨೦೧೬-೧೭ ರಲ್ಲಿ ೨ ಗಂಡು, (೨೦೧೭-೧೮ ರಲ್ಲಿ ಯಾವುದೇ ಜಿಂಕೆಗಳು ಮೃತಪಟ್ಟಿಲ್ಲ), ೨೦೧೮-೧೯ ರಲ್ಲಿ ೩ ಗಂಡು, ೫ ಹೆಣ್ಣು ಮತ್ತು ಒಂದು ಮರಿ, ೨೦೧೯-೨೦ ರಲ್ಲಿ ೧ ಹೆಣ್ಣು, ೨೦೨೦-೨೧ ರಲ್ಲಿ ೧ ಹೆಣ್ಣು, ೨೦೨೧-೨೨ ರಲ್ಲಿ ೮ ಹೆಣ್ಣು, ೨೦೨೨-೨೩ ರಲ್ಲಿ ೨ ಗಂಡು, ೭ ಹೆಣ್ಣು ; ೨೦೨೩-೨೪ ನೇ ಸಾಲಿನಲ್ಲಿ ೨೦೨೪ ರ ಮಾರ್ಚ್ ಅಂತ್ಯದವರೆಗೆ ೬ ಗಂಡು, ೭ ಹೆಣ್ಣು ಜಿಂಕೆಗಳು ಮೃತಪಟ್ಟಿವೆ. ೨೦೧೬-೧೭ ನೇ ಸಾಲಿನಲ್ಲಿ ೨೦೧೭ ರ ಫೆಬ್ರವರಿ ತಿಂಗಳಿನಲ್ಲಿ ಒಂದು ಹೆಣ್ಣು ಹಾಗೂ ಮಾರ್ಚ್‌ನಲ್ಲಿ ಒಂದು ಹೆಣ್ಣು ಮತ್ತು ಒಂದು ಮರಿ ಜಿಂಕೆ ಸೇರಿ ಒಟ್ಟು ೩ ಜಿಂಕೆಗಳು ಚಿರತೆ ದಾಳಿಗೆ ಬಲಿಯಾಗಿವೆ ಎಂದು ಜಿಂಕೆಗಳ ಸಾವಿನ ಬಗ್ಗೆ ಅಂಕಿಅಂಶಗಳನ್ನು ಅರಣ್ಯ ಇಲಾಖೆಯು ನೀಡಿದೆ.
ಈಗ ೯೯ ಜಿಂಕೆಗಳಿವೆ
ಈ ಜಿಂಕೆವನದಲ್ಲಿ ೨೦೧೬-೧೭ ರಲ್ಲಿ ೮೯ ಜಿಂಕೆಗಳು, ೨೦೧೭-೧೮ ರಲ್ಲಿ ೮೧ ಜಿಂಕೆಗಳು, ೨೦೧೮-೧೯ ರಲ್ಲಿ ೮೫ ಜಿಂಕೆಗಳು, ೨೦೧೯-೨೦ರಲ್ಲಿ ೯೪ ಜಿಂಕೆಗಳು, ೨೦೨೦-೨೧ ರಲ್ಲಿ ೧೦೪ ಜಿಂಕೆಗಳು, ೨೦೨೧-೨೨ ರಲ್ಲಿ ೧೦೩ ಜಿಂಕೆಗಳು, ೨೦೨೨-೨೩ ರಲ್ಲಿ ೧೦೨ ಜಿಂಕೆಗಳು, ೨೦೨೩-೨೪ ರಲ್ಲಿ ಮಾರ್ಚ್ ಅಂತ್ಯದವರೆಗೆ ೯೫ ಜಿಂಕೆಗಳು ಇದ್ದವು. ೨೦೨೪ ರ ಈ ವರ್ಷ ೪೫ ಗಂಡು, ೫೦ ಹೆಣ್ಣು ಹಾಗೂ ೪ ಮರಿಗಳು ಸೇರಿ ಒಟ್ಟು ೯೯ ಜಿಂಕೆಗಳಿವೆ ಎಂದು ಆರ್.ವಿಶ್ವನಾಥನ್ ಅವರಿಗೆ ನೀಡಿರುವ ಮಾಹಿತಿಯಲ್ಲಿ ಅರಣ್ಯ ಇಲಾಖೆ ತಿಳಿಸಿದೆ.
ನೀರು, ಹಿಂಡಿ, ಮೇವು ವ್ಯವಸ್ಥೆ
ಕೇಂದ್ರ ಮೃಗಾಲಯ ಪ್ರಾಧಿಕಾರದ (ಸಿ.ಜಡ್.ಎ.) ನಿರ್ದೇಶನದ ಅನುಸಾರವಾಗಿ ಕಾಂಕ್ರೀಟ್ ವಾಟರ್ ಟ್ಯಾಂಕ್ ಮೂಲಕ ಸ್ವಚ್ಛ ಕುಡಿಯುವ ನೀರನ್ನು ಜಿಂಕೆಗಳಿಗೆ ಒದಗಿಸಲಾಗುತ್ತಿದೆ. ದೈನಂದಿನ ಆಹಾರವಾಗಿ ಹಿಂಡಿಬೂಸಾ ಮತ್ತು ಹಸಿರು ಮೇವನ್ನು ನೀಡಲಾಗುತ್ತಿದೆ. ಆಹಾರ ಮತ್ತು ನೀರು ಒದಗಿಸುವ ಕಟ್ಟೆಗಳನ್ನು ಹಾಗೂ ಆಹಾರ ಸಂಗ್ರಹಣಾ ಕೊಠಡಿ ಮತ್ತು ಕೆಲಸದ ವೇದಿಕೆಗಳನ್ನು ಸೋಂಕುರಹಿತವಾಗಿ ಸ್ವಚ್ಛಗೊಳಿಸಲಾಗುತ್ತಿದೆ. ಕಾಲಕಾಲಕ್ಕೆ ನಿಯಮಿತವಾಗಿ ಪಶುವೈದ್ಯಾಧಿಕಾರಿಗಳಿಂದ ಜಿಂಕೆಗಳ ಅರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತಿದೆ ಎಂದು ವಲಯ ಅರಣ್ಯಾಧಿಕಾರಿಗಳು ಹೇಳಿಕೊಂಡಿದ್ದಾರೆ.
೧೦ ಲಕ್ಷ ರೂ. ಸಂಗ್ರಹ
ನಾಮದಚಿಲುಮೆ ಪ್ರವೇಶದರ ವಯಸ್ಕರಿಗೆ ೧೦ ರೂ., ಮಕ್ಕಳಿಗೆ ೫ ರೂ ಹಾಗೂ ಕ್ಯಾಮರಾಕ್ಕೆ ೧೦೦ ರೂ. ನಿಗದಿಪಡಿಸಲಾಗಿದೆ. ೨೦೨೩-೨೪ ರ ಒಂದೇ ವರ್ಷದಲ್ಲಿ ಪ್ರವೇಶದರವಾಗಿ ಒಟ್ಟು ೧೦,೦೬,೫೦೦ ರೂ. ಸಂಗ್ರಹವಾಗಿದೆ. ೨೦೨೪ ರ ಏಪ್ರಿಲ್‌ನಲ್ಲಿ ೪೭,೨೫೦ ರೂ., ಮೇ ತಿಂಗಳಲ್ಲಿ ೮೪,೮೬೦ ರೂ. ಸಂಗ್ರಹವಾಗಿದೆ ಎಂದು ಅರ್ಜಿದಾರರಿಗೆ ಮಾಹಿತಿ ನೀಡಲಾಗಿದೆ.
ಅಭಿವೃದ್ಧಿ ಕೈಗೊಂಡಿಲ್ಲ !
ಕೇವಲ ಒಂದು ವರ್ಷದಲ್ಲಿ ೧೦ ಲಕ್ಷ ರೂ. ಸಂಗ್ರಹವಾಗಿದ್ದರೂ, ನಾಮದಚಿಲುಮೆ ಹಾಗೂ ಔಷಧಿವನದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವನ್ನು ಕೈಗೊಂಡಿಲ್ಲ. ಕೇವಲ ನಿರ್ವಹಣೆ ನಡೆದಿದೆ ಎಂದು ವಲಯ ಅರಣ್ಯಾಧಿಕಾರಿಗಳು ತಿಳಿಸಿರುವುದು ಪ್ರಶ್ನಾರ್ಹ ಹಾಗೂ ಚರ್ಚಾರ್ಹವಾಗಿದೆ ಎಂದಿರುವ ಆರ್.ವಿಶ್ವನಾಥನ್, ನಾಮದಚಿಲುಮೆ ಪ್ರದೇಶ ಹಾಗೂ ಜಿಂಕೆವನದ ಜವಾಬ್ದಾರಿಯನ್ನು ಊರ್ಡಿಗೆರೆ ಶಾಖೆಯ ಉಪವಲಯ ಅರಣ್ಯಾಧಿಕಾರಿಗಳು ಹೊತ್ತಿದ್ದಾರೆಂದು ಮಾತ್ರ ತಿಳಿಸಿದ್ದು, ನಾಮದಚಿಲುಮೆಯಲ್ಲಿರುವ ಇತರೆ ಸಿಬ್ಬಂದಿ ಬಗ್ಗೆ ಮಾಹಿತಿ ಕೊಡದಿರುವುದು ಅಚ್ಚರಿದಾಯಕವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.