ಷೇರುದಾರರಿಗೆ ಸ್ಪಂದಿಸಿ ಕೆಲಸ ಮಾಡಿ: ಹೆಚ್.ಟಿ.ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.03: ವೈಯಕ್ತಿಕ ಹಿತಾಸಕ್ತಿ ಬದಿಗೊತ್ತಿ ಸಂಘ ಸಂಸ್ಥೆಗಳಲ್ಲಿ ಷೇರುದಾರರ ಆಶೋತ್ತರಗಳಿಗೆ ಸ್ಪಂಧಿಸಿ ಕೆಲಸ ಮಾಡಿದಾಗ ಸಹಕಾರ ಸಂಘಗಳು ಯಶಸ್ವಿಯಾಗುತ್ತವೆ ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.
ಅವರು ಪಟ್ಟಣದ ತಮ್ಮ ಕಛೇರಿಯಲ್ಲಿ ತಾಲ್ಲೂಕು ಶಿಕ್ಷಣ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರನ್ನು ಅಭಿನಂದಿಸಿ ಮಾತನಾಡಿದರು
ಶಿಕ್ಷಕ ವೃತ್ತಿ ಪವಿತ್ರವಾದುದು ಅಂಥಹ ವೃತ್ತಿಯಲ್ಲಿ ತಮ್ಮ ಜೀವಮಾನವನ್ನೆಲ್ಲಾ ಮಕ್ಕಳ ಜ್ಞಾನಾರ್ಜನೆಗಾಗಿ ವ್ಯಯಿಸುವ ಶಿಕ್ಷಕರ ಬಗ್ಗೆ ಸಮಾಜದಲ್ಲಿ ಅಪಾರವಾದ ಗೌರವವಿದೆ. ಇಡೀ ಸಮಾಜವೇ ಶಿಕ್ಷಕನಿಂದ ರೂಪುಗೊಂಡಿರುತ್ತದೆ. ವೈದ್ಯರು, ರಾಜಕಾರಣಿಗಳು, ಇಂಜಿನಿಯರ್, ಸೇರಿದಂತೆ ನೂರಾರು ಬಗೆಯ ಸೇವೆಗಳಿಗೆ ಹೋಗುವ ಪ್ರತಿ ವ್ಯಕ್ತಿಯನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸುವಲ್ಲಿ ಶಿಕ್ಷಕನ ಪಾತ್ರ ಮಹತ್ವದ್ದಾಗಿರುತ್ತದೆ. ತಾಲ್ಲೂಕಿನಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸುತ್ತಿರುವ ನಿಮಗೆ ನಿಮ್ಮ ಆಶೋತ್ತರಗಳನ್ನು ಈಡೇರಿಸಲು ನಿಮ್ಮದೇ ಆದ ಸಂಸ್ಥೆಯನ್ನು ಸ್ಥಾಪಿಸಿಕೊಂಡು ಸಾವಿರಾರು ಶಿಕ್ಷಕರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ಪತ್ತಿನ ಸಹಕಾರ ಸಂಘವನ್ನು ಆರಂಭಿಸಿ ಉತ್ತಮವಾಗಿ ನಿರ್ವಹಣೆ ಮಾಡುತ್ತಿರುವುದು ಸಂತಸದ ವಿಷಯವಾಗಿದ್ದು ಎರಡು ಲಕ್ಷ ರೂಪಾಯಿಗಳವರೆಗೆ ಅರ್ಜಿ ಸಲ್ಲಿಸಿದ ಒಂದು ಗಂಟೆಯಲ್ಲಿಯೇ ಸಾಲಸೌಲಭ್ಯ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ? ಎರಡು ಕೋಟಿ ರೂಪಾಯಿಗಳವರೆಗೆ ವ್ಯವಹಾರ ಮಾಡುತ್ತಿರುವ ಸಂಸ್ಥೆಯು ಉತ್ತಮ ಆಡಳಿತ ಮಂಡಳಿಯನ್ನು ಒಳಗೊಂಡಿದ್ದು ಅರ್ಪಣಾ ಮನೋಭಾವದಿಂದ ಕೆಲಸ ಮಾಡಿದಾಗ ಮಾತ್ರ ಸಹಕಾರ ಸಂಸ್ಥೆಗಳಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂಧರ್ಭದಲ್ಲಿ ನೂತನ ಅಧ್ಯಕ್ಷ ಆರ್.ಕೆ.ರಮೇಶ್, ಉಪಾದ್ಯಕ್ಷ ಕೋದಂಡರಾಮು, ಗೌರವಾದ್ಯಕ್ಷ ನಾಗಕುಮಾರ್, ಆಂತರಿಕ ಲೆಕ್ಕಪರಿಶೋಧಕ ಎ.ಹೆಚ್.ಯೋಗೇಶ್ ಮುಂತಾದವರನ್ನು ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪದ್ಮೇಶ್, ಕಾರ್ಯದರ್ಶಿ ಸಿ.ಟಿ.ಲಕ್ಷ್ಮಣಗೌಡ, ತಾಲ್ಲೂಕು ಕಸಾಫ ಅಧ್ಯಕ್ಷ ಪೂರ್ಣಚಂದ್ರತೇಜಸ್ವಿ, ಜಿಲ್ಲಾ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಕೆ.ಹೇಮಣ್ಣ, ನಿರ್ದೇಶಕರಾದ ಎಸ್.ಎಸ್.ಶಿವಕುಮಾರ್, ಶಿಕ್ಷಕರಾದ ದೊರೆಸ್ವಾಮಿ, ಎ.ಕೆ.ದೇವರಾಜು, ಎಸ್.ಎನ್,ಮಂಜೇಗೌಡ, ಕಿರಣ್ ಕುಮಾರ್, ಅಣ್ಣಯ್ಯ, ಪಿ.ಬಿ.ನಾಗರಾಜು, ಸೇರಿದಂತೆ ಹಲವರಿದ್ದರು.