ಒಳ ಮೀಸಲಾತಿ ತೀರ್ಪು- ದಂಡೋರ ಸಮಿತಿ ಸಂತಸ
ಕೋಲಾರ,ಆ,೩- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಒಳಮೀಸಲಾತಿ ನೀಡಿರುವುದು ಕಾನೂನು ಬದ್ಧ ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿರುವುದಕ್ಕೆ ಮಾದಿಗ ದಂಡೋರ ಸಮಿತಿಯು ಹರ್ಷ ವ್ಯಕ್ತಪಡಿಸಿದೆ.
ನಗರದ ನಚಿಕೇತನ ನಿಲಯದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜೈಕಾರಗಳನ್ನು ಹಾಕುವ ಮೂಲಕ ಮಾದಿಗ ದಂಡೋರ ಸಮಿತಿಯ ಸಂಭ್ರಮಾಚರಣೆ ನಡೆಸಿದರು. ಸುಪ್ರೀಂಕೋರ್ಟ್ ನೀಡಿರುವ ಒಳ ಮೀಸಲಾತಿ ತೀರ್ಪಿಗೆ ಸಂತಸ ವ್ಯಕ್ತಪಡಿಸಿದರು.
ಮಾದಿಗ ದಂಡೋರ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜೆ.ಎಂ.ದೇವರಾಜ ಮಾತನಾಡಿ, ಒಳ ಮೀಸಲಾತಿಯನ್ನು ಎತ್ತಿ ಹಿಡಿಯುವ ಮೂಲಕ ಸುಪ್ರೀಂಕೋರ್ಟ್ ೭ ಸದಸ್ಯರ ಪೀಠ ನೀಡಿರುವ ತೀರ್ಪು ಸಾಮಾಜಿಕ ನ್ಯಾಯಕ್ಕೆ ಸಿಕ್ಕ ಜಯವಾಗಿದೆ. ಒಳ ಮೀಸಲಾತಿಗಾಗಿ ಕಳೆದ ೩೦ ವರ್ಷಗಳ ನಿರಂತರವಾಗಿ ಹೋರಾಟ ಮಾಡುತ್ತಿದ್ದೆವು. ಈಗ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದರು.
ಜಿಲ್ಲಾ ಕಾರ್ಯದರ್ಶಿ ಆಂಜಿನಪ್ಪ ಡಿ.ಎನ್ ಮಾತನಾಡಿ, ಒಳಮೀಸಲಾತಿ ಜಾರಿಗಾಗಿ ಅನೇಕ ದಶಕಗಳಿಂದ ಹೋರಾಟ ನಡೆದಿತ್ತು. ಈಗ ಸುಪ್ರೀಂಕೋರ್ಟ್ ಸಹ ಈ ಒಳ ಮೀಸಲಾತಿ ಜಾರಿಗೊಳಿಸಲು ಅನುಮತಿ ನೀಡಿರುವುದು ಮತ್ತಷ್ಟು ಸಂತಸ ತಂದಿದೆ. ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ಸಾಮಾಜಿಕ ನ್ಯಾಯಕ್ಕೆ ಹಾಗೂ ಭಾರತೀಯ ಸಂವಿಧಾನದ ಆಶಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಕಲಾ ಮಂಡಳಿ ಅಧ್ಯಕ್ಷ ಶಾಮರಾಜ, ಮಂಜುಳಮ್ಮ, ಗೌರವಾಧ್ಯಕ್ಷ ರವಿ ಕುಮಾರ್ ಎಂ, ಹೂಹಳ್ಳಿ ಕೃಷ್ಣಪ್ಪ, ಮಾದಿಗ ದಂಡೋರ ಜಿಲ್ಲಾ ಅಧ್ಯಕ್ಷ ಹಾಲೇರಿ ಮುನಿರಾಜು, ಹಾರೋಹಳ್ಳಿ ಶ್ರೀನಿವಾಸ್, ದೇವರಾಜ, ಮಾಕೊಂಡಪ್ಪ, ಗುರುಸ್ವಾಮಿ, ಹಾರೋಹಳ್ಳಿ ವೆಂಕಟೇಶಪ್ಪ, ನಾರಾಯಣಸ್ವಾಮಿ, ಗಂಗಮ್ಮಪಾಳ್ಯ ನಾಗೇಶ್, ಎಸ್.ಪಿಳ್ಳಪ್ಪ, ತಾಲೂಕು ಅಧ್ಯಕ್ಷ ನರಸಿಂಹಮೂರ್ತಿ, ಅಶ್ವತ್ಥ್, ವೆಂಕಟೇಶಪ್ಪ, ನಾರಾಯಣಸ್ವಾಮಿ, ನರಸಿಂಹಪ್ಪ, ಮುನಿಯಪ್ಪ, ಮಂಜುನಾಥ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.