ಮಾನವ ಕಳ್ಳ ಸಾಗಾಣಿಕೆ ತಡೆಗೆ ಕೈಜೋಡಿಸಿ
ಕೋಲಾರ,ಆ,೩- ಮಾನವ ಕಳ್ಳ ಸಾಗಾಣಿಕೆ ಒಂದು ಸಾಮಾಜಿಕ ಪಿಡುಗಾಗಿದ್ದು, ಇದರ ಕುರಿತು ಅರಿವು ನೀಡುವ ಮೂಲಕ ಸಮುದಾಯ ಸದಾ ಜಾಗೃತಿಯಿಂದಿರಲು ಮಾರ್ಗದರ್ಶನ ನೀಡಿ, ಮಹಿಳೆಯರು,ಮಕ್ಕಳನ್ನು ರಕ್ಷಿಸುವ ಅಗತ್ಯವಿದೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ ಎಸ್.ಹೊಸಮನಿ ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಸೈನಿಕ್ ಪಬ್ಲಿಕ್ ಶಾಲೆ ಆಶ್ರಯದಲ್ಲಿ ಶಾಲೆಯಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮಹಿಳೆರು, ಮಕ್ಕಳನ್ನು ಕಳ್ಳ ಸಾಗಾಣಿಕೆ ಮಾಡಿಬಾಲಕಾರ್ಮಿಕರನ್ನಾಗಿ ದುಡಿಸಿಕೊಳ್ಳುವುದು, ಭಿಕ್ಷಾಟನೆಗೆ ಕಳುಹಿಸುವ ದಂಧೆ ನಡೆಯುತ್ತಿದ್ದು, ಇಂತಹ ಪ್ರಕರಣಗಳು ಗಮನಕ್ಕೆ ಬಂದರೆ ಕೂಡಲೇ ಪೊಲೀಸರಿಗೆ ಅಥವಾ ಸಹಾವಾಣಿಗೆ ಮಾಹಿತಿ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮಹಿಳಾ ಸಹಾಯವಾಣಿ ೧೦೮೧ ಹಾಗೂ ಮಕ್ಕಳ ಸಹಾಯವಾಣಿ ೧೦೯೮ ಕುರಿತು ಮಾಹಿತಿ ನೀಡಿದ ಅವರು, ಬಾಲಕಾರ್ಮಿಕತೆ, ಬಾಲ್ಯವಿವಾಹ, ಮಾನವ ಕಳ್ಳಸಾಗಾಣಿಕೆಯಂತಹ ಘಟನೆಗಳು ಕಂಡು ಬಂದರೆ ಈ ಸಂಖ್ಯೆಗೆಮಾಹಿತಿ ನೀಡಿ, ನಿಮ್ಮ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ ಮಾತನಾಡಿ, ಪ್ರತಿ ವರ್ಷ ಜು.೩೦ ರಂದು ಮಾನವ ಕಳ್ಳಸಾಗಾಣಿಕೆ ವಿರೋಧಿದಿನ ಆಚರಿಸಿದರೆ ಸಾಲದು ಪ್ರತಿ ನಿತ್ಯ ಮಕ್ಕಳು,ಮಹಿಳೆಯರಿಗೆ ಕಂಟಕವಾಗಿರುವ ಈ ದಂಧೆ ತಡೆಯಲು ಸಹಕರಿಸಬೇಕು ಎಂದು ಕೋರಿದರು.
ಇದೇ ಸಂದರ್ಭದಲ್ಲಿ ಮಾನವ ಕಳ್ಳಸಾಗಾಣಿಕೆ ತಡೆಗೆ ಪ್ರತಿಜ್ಞಾ ವಿಧಿ ಬೋಧಿಸಿದ ನ್ಯಾಯಾಧೀಶರು, ಲಿಂಗಪತ್ತೆ ನಿಷೇಧ ಕಾಯಿದೆ, ಹೆಣ್ಣು ಭ್ರೂಣ ಹತ್ಯೆ ತಡೆ ಕಾಯಿದೆ, ಬಾಲ್ಯವಿವಾಹನ ಕಾಯಿದೆ, ಮೋಟಾರ್ ವಾಹನ ಕಾಯಿದೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಬಾಲಕಾರ್ಮಿಕತೆ ನಿಷೇಧ ಕಾನೂನು ಇದೆ, ವಿದ್ಯೆ ಕಲಿಯುವ ವೇಳೆಯಲ್ಲಿ ಅವರ ಬದುಕನ್ನು ಸರ್ವನಾಶ ಮಾಡುವ ಮನಸ್ಥಿತಿ ಒಳ್ಳೆಯದಲ್ಲ, ಸರ್ಕಾರಿ ಶಾಲೆಗಳಲ್ಲಿ ಇಂದು ಗುಣಮಟ್ಟದ ಶಿಕ್ಷಣದ ಜತೆಗೆ ಬಿಸಿಯೂಟ, ಕ್ಷೀರಭಾಗ್ಯ, ಉಚಿತ ಪಠ್ಯಪುಸ್ತಕ, ಸಮವಸ್ತ್ರ ಮತ್ತಿತರ ಸೌಲಭ್ಯಗಳಿವೆ ಇದರ ಸದುಪಯೋಗ ಪಡೆಯಬೇಕು ಎಂದು ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೈನಿಕ್ ಪಬ್ಲಿಕ್ ಶಾಲೆ ಮುಖ್ಯಶಿಕ್ಷಕ ಬಾಲಕೃಷ್ಣಪ್ಪ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಉಚಿತ ಶಿಕ್ಷಣವಿದೆ, ಮಕ್ಕಳು ಕಲಿಯುವ ವಯಸ್ಸಿನಲ್ಲಿ ದುಡಿಮೆಗೆ ಹೋಗಬಾರದು, ಈ ದೇಶ, ಸಮಾಜವನ್ನು ಬದಲಿಸುವ ಶಕ್ತಿ ಶಿಕ್ಷಣಕ್ಕಿದೆ, ಅಂತಹ ಶಿಕ್ಷಣ ಪಡೆದು ಉನ್ನತ ವ್ಯಕ್ತಿಗಳಾಗಿ ಸಂಸ್ಕಾರ,ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು ದುಶ್ಚಟಗಳಿಂದ ದೂರವಿರಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಿಆರ್‌ಪಿ ಜಮೀರ್ ಅಹಮದ್,ಆಡಳಿತ ಮಂಡಳಿ ಅಧ್ಯಕ್ಷೆ ಶಾಂತಮ್ಮ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಹಾಜರಿದ್ದರು.