ಗ್ರಾಮೀಣರ ಅಭಿವೃದ್ಧಿಗೆ ನಬಾರ್ಡ್ ಸಾಲ ಸೌಲಭ್ಯ
ಚಿಕ್ಕನಾಯಕನಹಳ್ಳಿ, ಆ. ೨- ಗ್ರಾಮೀಣರ ಅಭಿವೃದ್ದಿಗೆ ಬ್ಯಾಂಕ್‌ಗಳಿಂದ ನಬಾರ್ಡ್ ಹಾಗೂ ಇನ್ನಿತರ ಸಾಲ ಸೌಲಭ್ಯ ಸಿಗಲಿದೆ ಎಂದು ಕೆಜಿಬಿ ಕಂದಿಕೆರೆ ಶಾಖಾ ವ್ಯವಸ್ಥಾಪಕ ಆರ್. ತಿಪ್ಪೇಸ್ವಾಮಿ ಹೇಳಿದರು.
ತಾಲ್ಲೂಕಿನ ಕಂದಿಕೆರೆ ಹೋಬಳಿ ರಾಮಪ್ಪನಹಟ್ಟಿಯಲ್ಲಿ ಗ್ರಾಮೀಣ ಬ್ಯಾಂಕ್ ಹಾಗೂ ಆರ್ಥಿಕ ಸಾಕ್ಷರಥಾ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ಜನಸುರಕ್ಷಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಬ್ಯಾಂಕ್‌ಗಳು ಕೇವಲ ಲಾಭಗಳಿಸುವ ಆರ್ಥಿಕ ವ್ಯವಹಾರ ಮಾಡುವ ಕೇಂದ್ರವಾಗಿರದೆ ತಮ್ಮ ವ್ಯಾಪ್ತಿ ಪ್ರದೇಶದ ಜನರ ಜೀವನದ ಅಭಿವೃದ್ದಿಯಲ್ಲಿ ಪ್ರಮುಖ ಭಾಗವಾಗಬೇಕು.. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ, ಮುದ್ರಾ ಯೋಜನೆ, ವಿಶ್ವಕರ್ಮ ಯೋಜನೆ, ಜಮೀನು ಅಭಿವೃದ್ದಿ ಸಾಲ, ಸ್ಟ್ಯಾಂಡ್‌ಆಫ್‌ಇಂಡಿಯಾ ನಬಾರ್ಡ್ ಯೋಜನೆಗಳ ಮೂಲಕ ಗ್ರಾಮೀಣರು ಆರ್ಥಿಕವಾಗಿ ಅಭಿವೃದ್ದಿಯಾಗಬಹುದಾದು.ಪಡೆದ ಸಾಲವನ್ನು ನಿಗಧಿತ ಅವಧಿಯಲ್ಲಿ ತೀರಿಸಿ ನಂಬಿಕೆ ಗ್ರಾಹಕರಾದಾಗ ಅಂತವರ ಮೇಲೆ ಬ್ಯಾಂಕ್‌ಗಳಿಗೆ ಹೆಚ್ಚು ವಿಶ್ವಾಸ ಬರಲಿದೆ ಎಂದರು.
ಆರ್ಥಿಕ ಸಾಕ್ಷರತಾ ಕೇಂದ್ರದ ಸಲಹೆಗಾರ ಕುಮಾರಸ್ವಾಮಿ ಆರ್.ಎಂ. ಮಾತನಾಡಿ, ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರವನ್ನು ಮಾಡುವ ಮೂಲಕ ಅಮೂಲ್ಯ ಸಮಯವನ್ನು ಉಳಿಸಬಹುದು ಎಂದರು.
ಈ ಸಂದರ್ಭದಲ್ಲಿ ಬ್ಯಾಂಕ್ ಅಧಿಕಾರಿ ಈರಣ್ಣ, ಅಶೋಕ್, ಗ್ರಾ.ಪಂ. ಸದಸ್ಯ ವಸಂತ್, ಮಾಜಿ ಸದಸ್ಯ ಈರಣ್ಣ, ಸಂಜೀವಿನಿ ಒಕ್ಕೂಟದ ಎಂಬಿಎ ಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.