ನಾಡು ಕಟ್ಟಲು ಮುಂದಾಗಲು ಯುವಕರಿಗೆ ಕರೆ
ಮಧುಗಿರಿ, ಆ. ೩- ಸೂಕ್ಷ್ಮ ಸಂವೇದನಾಶೀಲ ಯುವ ಮನಸ್ಸುಗಳು ಜಾತಿ, ಮತ, ಪಂಥ, ಲಿಂಗಭೇದಗಳಿಲ್ಲದೆ ಸಮಾಜಮುಖಿ ಚಿಂತನೆಗಳಿಂದ ನಾಡು ಕಟ್ಟುವ ಪ್ರಯತ್ನ ಮಾಡಬೇಕು. ತಳಸಮುದಾಯಗಳು, ಆದಿವಾಸಿಗಳು ಶೇ.೨೫ ರಷ್ಟು ಸಮಾಜದ ಮುಖ್ಯವಾಹಿನಿಗೆ ಬಂದಿಲ್ಲದಿರುವುದು ಸಾಮಾಜಿಕ ದುರಂತ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ಬಾಲಗುರುಮೂರ್ತಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾಹಿತ್ಯ, ಸಂಸ್ಕೃತಿ ಕ್ಷೇತ್ರಗಳಲ್ಲಿ ನಡೆಯುವ ಸಾಂಸ್ಕೃತಿಕ ರಾಜಕಾರಣದಿಂದಾಗಿ ಅನೇಕ ಮಹನೀಯರು ಎಲೆ ಮರೆಯ ಕಾಯಿಗಳಂತಿದ್ದು ಅಸ್ಮಿತೆಯ ಅಭಾವದಿಂದಾಗಿ ಮುನ್ನೆಲೆಗೆ ಬರದೇ ಹೋಗುತ್ತಾರೆ. ಸಾಂಸ್ಕೃತಿಕ ವಿಸ್ಮೃತಿಗೆ ಒಳಗಾಗುವುದರಿಂದ ಚಾರಿತ್ರಿಕ ಒಳನೋಟಗಳ ಕೊರತೆಯಿಂದ ನರಳುತ್ತಿರುವುದೂ ಒಂದು ಬಗೆಯಲ್ಲಿ ಇತಿಹಾಸ ಸೃಷ್ಠಿಗೆ ಹಿನ್ನಡೆಯಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಾಳಪ್ಪ ಎ. ಬಿ. ಮಾತನಾಡಿ, ಪಠ್ಯ ಚಟುವಟಿಕೆಗಳಂತೆಯೇ ಪಠ್ಯೇತರ ಚಟುವಟಿಕೆಗಳೂ ಮುಖ್ಯ. ಪಠ್ಯ ಚಟುವಟಿಕೆಗಳು ಜ್ಞಾನಾರ್ಜನೆಗೆ ಆಹಾರ ಒದಗಿಸಿದರೆ ಪಠ್ಯೇತರ ಚಟುವಟಿಕೆಗಳು ಮನಸ್ಸನ್ನು ಆಹ್ಲಾದಗೊಳಿಸುತ್ತದೆ ಎಂದರು.
ಸಮಾರಂಭದಲ್ಲಿ ಮಹಾಲಿಂಗೇಶ್, ನರಸಿಂಹಮೂರ್ತಿ, ಶಶಿಕುಮಾರ್ ಎಸ್. ಎಲ್., ಲೆಕ್ಕಪರಿಶೋಧಕರಾದ ವೀರೇಶ್, ಮಾರುತಿ, ರೇಖಾ ಎಸ್., ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರಾದ ಕಿಶೋರ್, ಕರಿಯಣ್ಣ, ಮಾರುತಿ, ಶಿವಣ್ಣ, ಪ್ರಾಧ್ಯಾಪಕರುಗಳಾದ ಡಾ.ಮಂಜುನಾಥ್ ಬುಡಸನಹಳ್ಳಿ, ಮುರುಳಿಧರ್, ರಾಮು ಜೆ., ಸುರೇಶ್ ಸಿ. ಜಿ., ಡಾ.ಶಂಕರಲಿಂಗಯ್ಯ, ಸ್ವಾಮಿ ಕೆ.ಟಿ., ಮಂಜುನಾಥ್ ಪೂಜೇರಿ, ಡಾ ವಿಜಯಲಕ್ಷ್ಮೀ, ವೇದಲಕ್ಷ್ಮೀ, ಲೀಲಾವತಿ, ಮಂಜುನಾಥ್ ಬಿ., ಚಂದ್ರಕಲಾ ಎನ್, , ಡಾ.ನಾಗರಾಜು, ಡಾ.ದುರ್ಗಪ್ಪ ಮತ್ತಿತರರು ಉಪಸ್ಥಿತರಿದ್ದರು.