ಪೌರ ಕಾರ್ಮಿಕರಿಗೆ ಮನೆಗಳ ನಿರ್ಮಾಣಕ್ಕೆ ಶೀಘ್ರ ಅನುಮೋದನೆ: ಜ್ಯೋತಿಗಣೇಶ್
ತುಮಕೂರು, ಆ. ೩- ೨೦೨೨ರಲ್ಲಿ ಅಂದಿನ ವಸತಿ ಸಚಿವರಾದ ವಿ.ಸೋಮಣ್ಣ ನವರ ಆದೇಶದ ಮೇರೆಗೆ ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ ೧೪೫೦ ಮನೆಗಳನ್ನು ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ನೀಡಲಾಗಿತ್ತು. ಈ ಯೋಜನೆಯಡಿ ಪೌರಕಾರ್ಮಿಕರಿಗೆ ಮತ್ತು ತುಮಕೂರು ನಗರದ ಕುಮುಟಯ್ಯ ಬಡಾವಣೆ ಪಾರ್ಕ್‌ನಲ್ಲಿ ವಾಸಿಸುತ್ತಿರುವ ಅಲೆಮಾರಿಗಳಿಗೆ ಹಾಗೂ ಅಮಾನಿಕೆರೆಯ ಕೋಡಿಹಳ್ಳದಲ್ಲಿರುವ ವಸತಿ ವಂಚಿತರಿಗೆ ವಸತಿ ವ್ಯವಸ್ಥೆ ಮಾಡಲು ಶಾಸಕರು ಸರ್ಕಾರಿ ಭೂಮಿಯನ್ನು ಗುರುತಿಸುವಂತೆ ಸೂಚನೆ ನೀಡಿದಾಗ ವಾರ್ಡ್ ನಂ.೦೧ರ ಹೊನ್ನೇನಹಳ್ಳಿ ಗ್ರಾಮದ ಸರ್ವೆ ನಂ.೪೪ರಲ್ಲಿ ೧ ಎಕರೆ ೩೯ ಗುಂಟೆ ಸರ್ಕಾರಿ ಜಾಗವಿದ್ದು, ಇಲ್ಲಿ ಮನೆಯನ್ನು ನಿರ್ಮಿಸಬಹುದಾಗಿದೆ ಎಂದು ಸದರಿ ವಾರ್ಡ್‌ನ ಮಹಾನಗರಪಾಲಿಕೆ ಸದಸ್ಯರಾಗಿದ್ದ ನಳಿನ ಇಂದ್ರಕುಮಾರ್ ಹೇಳುವ ಮೂಲಕ ಶಾಸಕರ ಗಮನಕ್ಕೆ ತಂದರು.
ಮಹಾನಗರ ಪಾಲಿಕೆ ಕಚೇರಿಯಲ್ಲಿ ನಡೆದ ತುಮಕೂರು ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿದ ಶಾಸಕ ಜ್ಯೋತಿಗಣೇಶ್ ಅವರು, ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ೧೯೪ ಮನೆಗಳನ್ನು ನಿರ್ಮಾಣ ಮಾಡಲು ಯೋಜನೆಯನ್ನು ರೂಪಿಸಿ ಕೆಲಸ ಪ್ರಾರಂಭವಾಗಿದ್ದು, ಅತಿ ಶೀಘ್ರದಲ್ಲಿ ಮನೆಗಳ ನಿರ್ಮಾಣ ಮಾಡಲಾಗುವುದು. ಅರ್ಹ ಫಲಾನಿಭವಿಗಳ ಪಟ್ಟಿಯನ್ನು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ್ ರವರ ಗಮನಕ್ಕೆ ತರಲಾಗುವುದು. ಈ ಹಿಂದೆ ವಸತಿ ವಂಚಿತರ ಸರ್ವೆಯ ಆನಲೈನ್ ಅರ್ಜಿಯನ್ನು ೨೦ ಸಾವಿರಕ್ಕೂ ಹೆಚ್ಚು ಜನ ಸಲ್ಲಿಸಿದ್ದರು. ಅರ್ಜಿಗಳ ಸ್ಥಳ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ೪ ಸಾವಿರ ಅರ್ಜಿಗಳು ಮಾತ್ರವೇ ಅರ್ಹವಾಗಿದ್ದವು. ಹಲವು ವಸತಿ ವಂಚಿತ ಜನರಿಗೆ ಇದರ ಬಗ್ಗೆ ಮಾಹಿತಿ ಇಲ್ಲದ ಕಾರಣ ಬಹಳಷ್ಟು ಜನರು ಅರ್ಜಿ ಸಲ್ಲಿಸಿರುವುದಿಲ್ಲ. ಮತ್ತೊಮ್ಮೆ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಬೇಕು ಎಂದರು.
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ೧೦ ರಿಂದ ೧೫ ಕಡೆ ಈ ಹಿಂದೆ ಕಂದಾಯ ಇಲಾಖೆ ವತಿಯಿಂದ ಬಡವರಿಗೆ ನಿವೇಶನಗಳ ಹಕ್ಕು ಪತ್ರಗಳನ್ನು ನೀಡಲಾಗಿತ್ತು. ಈ ಪ್ರದೇಶಗಳು ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಸೇರಿದ ನಂತರ ಈ ಹಕ್ಕು ಪತ್ರಗಳಿಗೆ ಸಂಬಂಧಿಸಿದಂತೆ ಸಮಸ್ಯೆ ಹೆಚ್ಚಾಗಿದ್ದು, ಪವತಿ ಖಾತೆ, ಕುಟುಂಬದವರ ವಿಭಾಗ ಖಾತೆ ಈ ರೀತಿಯಾಗಿ ಇನ್ನು ಹಲವು ಸಮಸ್ಯೆಗಳು ಇದೆ ಎಂದು ನಗರದ ನಾಗರೀಕರು ನನ್ನ ಬಳಿ ತಿಳಿಸಿದ್ದಾರೆ. ಆದ್ದರಿಂದ ಈ ಕೂಡಲೇ ಹಕ್ಕುಪತ್ರಗಳ ಸಮಸ್ಯೆಯನ್ನು ಬಗೆಹರಿಸಲು ಮಹಾನಗರಪಾಲಿಕೆ ಅಧಿಕಾರಿಗಳನ್ನು ನೇಮಿಸಿ ಕಾನೂನಿನ ನಿಯಮದಡಿ ಸಮಸ್ಯೆ ಬಗೆಹರಿಸಲು ಶಾಸಕರು ಸೂಚನೆ ನೀಡಿದರು.
ನಗರದ ದಿಬ್ಬೂರಿನಲ್ಲಿ ರಾಜೀವ್‌ಗಾಂಧಿ ಅವಾಜ್ ಯೋಜನೆಯಡಿ ನಿರ್ಮಿಸಿರುವ ೧೨೦೦ ಮನೆಗಳನ್ನು ಫಲಾನುಭವಿಗಳಿಗೆ ನೀಡಿದ್ದು, ಇದರಲ್ಲಿ ೬೦೦ಕ್ಕೂ ಹೆಚ್ಚು ಮನೆಗಳಲ್ಲಿ ಅನರ್ಹರು ಹಾಗೂ ಖಾಸಗಿಯವರು ವಾಸವಾಗಿರುವುದು ಕಂಡು ಬಂದಿದ್ದು, ಆ ಕಾರಣದಿಂದ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಆಶ್ರಯ ಸಮಿತಿ ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತೆ ಅಶ್ವಿಜ.ಬಿ.ವಿ. ತಿಳಿಸಿದರು.
ಈ ಮಧ್ಯೆ ಅರ್ಜಿದಾರರುಗಳು / ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳು ನಾವೇ ಮನೆಯನ್ನು ಕೊಡಿಸುವುದಾಗಿ ಆಮಿಷ ಒಡ್ಡಿದರೆ ಹಾಗೂ ಮುಗ್ದ ನಾಗರಿಕರಿಂದ ಹಣ ವಸೂಲಿ ಮಾಡಿದರೆ ದಿಕ್ಕು ತಪ್ಪಿಸುವ ಕಾರ್ಯಗಳು ಕಂಡು ಬಂದರೆ, ಪೊಲೀಸ್ ಠಾಣೆಗೆ ದೂರು ನೀಡಬಹುದು ಹಾಗೂ ಸಾರ್ವಜನಿಕರು ನೇರವಾಗಿ ಶಾಸಕರ ಕಚೇರಿಯನ್ನು ಸಂಪರ್ಕಿಸಬಹದಾಗಿದೆ ಎಂದು ಶಾಸಕ ಜ್ಯೋತಿಗಣೇಶ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.