ಮೊಬೈಲ್ ಚಟಕ್ಕೆ ಬಲಿಯಾಗಬೇಡಿ: ಡಾ. ಪರಮಶಿವಮೂರ್ತಿ
ತುಮಕೂರು, ಆ. ೩- ಪದವಿ ಹಂತದ ಅಧ್ಯಯನ ಮುಂದಿನ ಭವಿಷ್ಯವನ್ನು ನಿರ್ಧಾರ ಮಾಡುವುದರಿಂದ ಮೊಬೈಲ್ ಚಟಕ್ಕೆ ಒಳಗಾಗದೇ ಪಠ್ಯಗಳಿಗೆ ಗಮನ ಕೊಟ್ಟು ಅಧ್ಯಯನ ಮಾಡಿ ಪದವಿ ಶಿಕ್ಷಣವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಕರೆ ನೀಡಿದರು.
ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಿರಿ ಸಂಪದ-೨೦೨೪ ಸಮರೋಪ ಸಮಾರಂಭ ಹಾಗೂ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳಲ್ಲಿ ಸಾಂಸ್ಕೃತಿಕ ಆಚರಣೆಗಳನ್ನು ಆಚರಿಸಿದಷ್ಟು ವಿದ್ಯಾರ್ಥಿಗಳು ಹೆಚ್ಚು ಪ್ರತಿಭಾವಂತರಾಗುತ್ತಾರೆ ಮತ್ತು ತಮ್ಮಲ್ಲಿರುವ ಚಟುವಟಿಕೆಯನ್ನು ಹೊರ ಹಾಕುತ್ತಾರೆ ಎಂದರು.
ಇತ್ತೀಚಿನ ದಿನದಲ್ಲಿ ಪದವಿ ಹಂತದಲ್ಲಿ ವಿದ್ಯಾರ್ಥಿಗಳ ಕಲಿಕೆಯ ಆಸಕ್ತಿ ಕೊರತೆ ಎದ್ದು ಕಾಣುತ್ತಿದೆ. ಕಲಿಕೆಗೆ ನಿರಂತರ ಪರಿಶ್ರಮ ಹಾಕುವ ಮನೋಭಾವ ಕ್ಷೀಣಿಸುತ್ತಿದೆ. ತಂತ್ರಜ್ಞಾನದ ಬಳಕೆಯಿಂದ ಅಧ್ಯಯನವನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಿಕೊಳ್ಳಬೇಕು. ಅದನ್ನು ಬಿಟ್ಟು ಮೊಬೈಲ್ ಬಳಕೆಯನ್ನು ದುರ್ಬಲ ವಿಷಯಗಳಿಗೆ ಹೆಚ್ಚು ವಿನಿಯೋಗಿಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳು ಚಿಂತನೆ ನಡೆಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾಯ ಹೇಮಲತಾ ಮಾತನಾಡಿ, ಕಾಲೇಜಿನ ವಾರ್ಷಿಕೋತ್ಸವ ವಿದ್ಯಾರ್ಥಿಗಳ ವಾರ್ಷಿಕ ಚಟುವಟಿಕೆಗಳ ಪ್ರತಿಬಿಂಬವಾಗಿದೆ. ವಿದ್ಯಾರ್ಥಿಗಳು ಕೇವಲ ಪಠ್ಯವಲ್ಲದೆ, ಕ್ರೀಡೆ ಮತ್ತು ಸಾಂಸ್ಕೃತಿ ಚಟಿವಟಿಕೆಗಳ ಅನಾವರಣಕ್ಕೆ ಮುಂದಾಗುವ ಅಗತ್ಯ ಇಂದಿನಿದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಹಾಯಕ ಆಡಳಿತ ಅಧಿಕಾರಿಗಳಾದ ಕಲಂದರ್ ಪಾಷ, ಸಾಂಸ್ಕೃತಿಕ ಕಾರ್ಯದರ್ಶಿಗಳು, ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ರಮೇಶ್ ಮಣ್ಣೆ ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ೨೦೨೩-೨೪ ರ ಸಾಲಿನ ಸಾಂಸ್ಕೃತಿಕ ಚಟುವಟಿಕೆಗಳು, ಕ್ರೀಡೆ, ಇನ್ನಿತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದವರಿಗೆ ಬಹುಮಾನ ವಿತರಣೆ ಮಾಡಲಾಯಿತು.