ಮುಡಾ ಹಗರಣ: ಸಿಎಂ ರಾಜೀನಾಮೆಗೆ ಒತ್ತಾಯ
ಕುಣಿಗಲ್, ಆ. ೩- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ಹಾಗೂ ವಾಲ್ಮೀಕಿ ಹಗರಣದಲ್ಲಿ ಭಾಗಿಯಾಗಿರುವುದರಿಂದ ಕೂಡಲೇ ರಾಜೀನಾಮೆ ನೀಡಬೇಕು ಎಂದು ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಡಿ. ಕೃಷ್ಣಕುಮಾರ್ ಆಗ್ರಹಿಸಿದರು.
ಪಟ್ಟಣದ ಎಸ್‌ಎಲ್‌ವಿ ಸಮುದಾಯ ಭವನದಲ್ಲಿ ತಾಲ್ಲೂಕು ಭಾರತೀಯ ಜನತಾ ಪಾರ್ಟಿ ಮಂಡಲ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೂಡಾ ಹಾಗು ವಾಲ್ಮೀಕಿ ನಿಗಮದ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದು ಲೋಕಸಭಾ ಚುನಾವಣೆಹೆ ಹಣ ವ್ಯಯಿಸಲಾಗಿದೆ. ಈಗಾಗಲೇ ಎಸ್‌ಐಟಿ ತನಿಖೆ ಜತೆಗೆ ಬ್ಯಾಂಕಿನಿಂದ ಸಿಬಿಐ ತನಿಖೆ ಮುಂದುವರೆದಿದ್ದು ಸಿಎಂ ಹಾಗೂ ಡಿಸಿಎಂ ತಲೆದಂಡ ಆಗಲಿದೆ ಎಂದರು.
ಮುಂದಿನ ದಿನಗಳಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಸಜ್ಜಾಗಬೇಕು ಎಂದು ಬಿಜೆಪಿ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಬಿಜೆಪಿ ಮುಖಂಡ ವೈ.ಎಚ್. ಹುಚ್ಚಯ್ಯ ಮಾತನಾಡಿ, ಮೈಸೂರು ಭಾಗದ ರೇಷ್ಮೆ ಅಭಿವೃದ್ಧಿಗಾಗಿ ಡಿ. ಕೃಷ್ಣಕುಮಾರ್ ಅವರಿಗೆ ಕೇಂದ್ರ ರೇಷ್ಮೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಬೇಕೆಂದು ನಿರ್ಣಯ ಕೈಗೊಳ್ಳಲು ಸಲಹೆ ನೀಡಿದರು.
ತಾಲ್ಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಕೆ.ಎಸ್. ಬಲರಾಮ್ ಮಾತನಾಡಿ, ರಾಜ್ಯ ಸರ್ಕಾರದ ಭ್ರಷ್ಟಾಚಾರ ಹಗರಣದ ವಿರುದ್ಧ ಬೆಂಗಳೂರಿನಿಂದ ಮೈಸೂರಿನವರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಪಾದಯಾತ್ರೆ ಹೊರಟಿದ್ದು, ಕುಣಿಗಲ್ ತಾಲ್ಲೂಕಿನಿಂದ ಆ. ೪ ರಂದು ಭಾಗವಹಿಸುವ ಬಗ್ಗೆ ಮಾಹಿತಿ ನೀಡಿದರು.
ವಾಲ್ಮೀಕಿ ಎಸ್ಸಿ, ಎಸ್ಟಿ ಸಮಾಜದ ಹಣ ದುರುಪಯೋಗ, ಮೂಡಾದಿಂದ ಮುಖ್ಯಮಂತ್ರಿ ಪತ್ನಿಯ ಹೆಸರಿನಲ್ಲಿ ಕಾನೂನುಬಾಹಿರವಾಗಿ ಸೈಟ್ ಪಡೆದಿರುವುದು, ಹೇಮಾವತಿ ನೀರಿನ ಲಿಂಕ್ ಕೆನಾಲ್‌ನಿಂದ ತಾಲ್ಲೂಕಿನ ರೈತರಿಗೆ ಅನ್ಯಾಯ, ಕುಣಿಗಲ್ ಸ್ಟಡ್ ಫಾರಂನ್ನು ಇಂಟಿಗ್ರೇಟೆಡ್ ಟಾನ್ ಶಿಪ್ ಮಾಡಲು ಹೊರಟಿರುವ ವಿರುದ್ಧ ಖಂಡನಾ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದರು.
ಸಭೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ದಿಲೀಪ್‌ಗೌಡ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಿವರಾಮಯ್ಯ, ನಡೆಮಾವಿನಪುರ ರಂಗಸ್ವಾಮಿ, ವೈಎಚ್ ರವಿಚಂದ್ರ, ತಾಲ್ಲೂಕು ಮಹಿಳಾ ಅಧ್ಯಕ್ಷೆ ರೂಪ ಗೋಪಾಲ್, ಪ್ರಧಾನ ಕಾರ್ಯದರ್ಶಿಗಳಾದ ದೇವರಾಜ್, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.