ಐಪಿ ಸೆಟ್‌ಗೆ ಆಧಾರ್ ಜೋಡಣೆ ವಿರೋಧಿಸಿ ರೈತರ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ, ಆ. ೩-ನೀರಾವರಿ ಪಂಪ್‌ಸೆಟ್‌ಗಳಿಗೆ (ಐಪಿ) ಆಧಾರ್ ಕಾರ್ಡ್ ಜೋಡಣೆ ಮಾಡಿಸುವುದರ ಹಿಂದೆ ವಿದ್ಯುತ್ ಖಾಸಗೀಕರಣ ಮಾಡಿ, ರೈತರಿಂದ ದುಪ್ಪಟ್ಟು ಶುಲ್ಕ ವಸೂಲಿ ಮಾಡುವ ಹುನ್ನಾರ ಅಡಗಿದೆ ಎಂದು ಆರೋಪಿಸಿ ರೈತ ಸಂಘದವರು ಪಟ್ಟಣದ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರೈತ ಸಂಘ ಹಾಗೂ ಹಸಿರುಸೇನೆಯ ತಾಲ್ಲೂಕು ಸಮಿತಿ ಕಾರ್ಯದರ್ಶಿ ಯದುಕುಮಾರ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ರೈತರು ಐಪಿ ಸೆಟ್ ಬಳಸುತ್ತಿದ್ದಾರೆ. ೧೦ ಎಚ್‌ಪಿವರೆಗಿನ ರೈತರ ಐಪಿ ಸೆಟ್‌ಗಳಿಗೂ ಯಾವುದೇ ವಿದ್ಯುತ್ ದರ ಇರುವುದಿಲ್ಲ. ಆದರೂ ಈಗ ಐಪಿ ಸೆಟ್ ರೈತರು ಆಧಾರ್ ಕಾರ್ಡ್ ಜೋಡಣೆ ಮಾಡಿಸಬೇಕು ಎಂದು ಆದೇಶ ಹೊರಡಿಸಿರುವುದು ಏಕೆ ಎಂದು ಪ್ರಶ್ನಿಸಿದರು.
ಆಧಾರ್ ಕಾರ್ಡ್ ಜೋಡಣೆ ಆದೇಶದ ಹಿಂದೆ ವಿದ್ಯುತ್ ಖಾಸಗೀಕರಣ ಮಾಡಲು ಬೇಕಾದ ಅಗತ್ಯ ತಯಾರಿ ನಡೆಯುತ್ತಿರಬಹುದು ಎಂಬ ಗುಮಾನಿ ಮೂಡಿದೆ. ಸರ್ಕಾರ ಇದನ್ನು ಸ್ಪಷ್ಟಪಡಿಸಬೇಕು ಎಂದರು.
ಕಾಂಗ್ರೆಸ್ ಚುನಾವಣೆಗೆ ಮೊದಲು ಎಂದಿಗೂ ವಿದ್ಯುತ್ ಖಾಸಗೀಕರಣ ಮಾಡುವುದಿಲ್ಲ ಎಂಬ ಭರವಸೆ ಕೊಟ್ಟಿತ್ತು. ಈಗ ವಿದ್ಯುತ್ ಖಾಸಗೀಕರಣ ಮಾಡುವುದಿಲ್ಲವೆಂದು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿ ಅದನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿಕೊಡಬೇಕಿತ್ತು. ಆದರೆ ರಾಜ್ಯ ಸರ್ಕಾರ ಇದುವರೆಗೂ ಆ ಕೆಲಸವನ್ನು ಮಾಡಲಿಲ್ಲ. ಇದು ಹೀಗೆಯೇ ಮುಂದುವರೆದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನಂತರ ಪ್ರತಿಭಟನಾ ರೈತರು ತಹಶೀಲ್ದಾರ್ ಕೆ.ಪುರಂದರ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಭಾಗ್ಯಮ್ಮ, ಸೀಬಿಲಿಂಗಯ್ಯ, ಯದುಕುಮಾರ್, ಕುಮಾರಯ್ಯ, ರೇವಣ್ಣ, ಸೈಯದ್ ಕಲಂದರ್, ಬಸವರಾಜು, ನಟರಾಜು ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.