ಪ್ರವಾಹ ಸಂಬಂಧಿ ಪರಿಹಾರ ಕಾಮಗಾರಿಗಳಿಗೆ 767 ಕೋಟಿ ರೂ: ಸಚಿವ ಕೃಷ್ಣ ಭೈರೇಗೌಡ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.03- ಪ್ರವಾಹ, ಅತಿವೃಷ್ಠಿ ಸಂಬಂಧಿ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಒಟ್ಟು 767 ಕೋಟಿ ರೂ. ಗಳನ್ನು ಒದಗಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದರು.
ಕೊಳ್ಳೇಗಾಲ ತಾಲೂಕಿನ ಪ್ರವಾಹ ಪೀಡಿತ ದಾಸನಪುರ ಗ್ರಾಮಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಅವಲೋಕಿಸಿದ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಮಳೆಯಿಂದಾಗಿ ಬೆಳೆ ಹಾನಿಯೂ ಕೂಡ ಸಾಕಷ್ಟು ಆಗಿದೆ. ಈ ವಾರದ ಮೊದಲು ಅಂದರೆ ನಾಲ್ಕೈದು ದಿನಗಳ ಹಿಂದೆ 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಆದರೆ ವಾರದಿಂದ ಈಚೆಗೆ ಇನ್ನೂ ಬೆಳೆ ಹಾನಿಯಾಗಿರುವುದು ಕಂಡು ಬಂದಿದ್ದು, ತಕ್ಷಣಕ್ಕೆ ಪರಿಹಾರದ ಕಡೆ ಗಮನ ನೀಡಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರವಾಹ ಕುರಿತ ಪರಿಹಾರ ಕಾಮಗಾರಿಗಳಿಗಾಗಿ 767 ಕೋಟಿ ರೂ.ಗಳನ್ನು ನೀಡಲಾಗಿದೆ. ಇನ್ನೊಂದು ವಾರದಲ್ಲಿ ಬೆಳೆ ಹಾನಿ ಮತ್ತಷ್ಟು ಹೆಚ್ಚಾಗಲಿವೆ. ಪರಿಹಾರ ಕೊಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ಕೊಟ್ಟಿದ್ದೇವೆ ಎಂದರು.
ರಾಜ್ಯಾದ್ಯಂತ 118 ಕಡೆ ಕಾಳಜಿ ಕೇಂದ್ರಗಳನ್ನು ತೆರೆದಿದ್ದೇವೆ. ಮಳೆಯ ಸಂದರ್ಭದಲ್ಲಿ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಇರುವಲ್ಲಿ, ಗುಡ್ಡದಲ್ಲಿ ಮನೆ ಮಾಡಿಕೊಂಡಿರುವವರನ್ನು ಕಾಳಜಿ ಕೇಂದ್ರಕ್ಕೆ ಕರೆತರುತ್ತಿದ್ದೇವೆ. ಕೆಲವರು ಸ್ವಯಂ ಪ್ರೇರಿತರಾಗಿ ಬರುತ್ತಿದ್ದಾರೆ. ಇನ್ನೂ ಕೆಲವು ಕಡೆ ಒತ್ತಾಯ ಪೂರ್ವಕವಾಗಿ ಸ್ಥಳಾಂಣಣತರಿಸುತ್ತಿದ್ದೇವೆ. ಯಾವುದೇ ಅನಾಹುತ ಆಗುವ ಮೊದಲು ಪ್ರಾಣ ಉಳಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಪ್ರಾಣ ಹೋದ ಮೇಲೆ ಪರಿಹಾರ ಕೊಡುವುದು ಮುಖ್ಯ ಅಲ್ಲ. ಒಟ್ಟು 18 ಸಾವಿರ ಜನರಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ, ಊಟ ಉಪಚಾರ ಒದಗಿಸುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.
ಮಳೆಗಾಲ ಅವಧಿಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದೆ. ಪ್ರವಾಹ, ಮಳೆ ಸಂಬಂಧಿ ಕೆಲಸಗಳು ಹೇಗೆ ಆಗುತ್ತಿದೆ ಎಂಬುದನ್ನ ನಾನು ಖುದ್ದು ಭೇಟಿ ನೀಡಿ ಪರಿಶೀಲಿಸುತ್ತಿದ್ದೇನೆ. ವಯನಾಡು ದುರಂತ ಆದ ಮೇಲೆ ನಾವೆಲ್ಲಾ ಬಹಳ ಎಚ್ಚರಿಕೆಯಿಂದ ಇರಬೇಕು. ಆಗಸ್ಟ್ ತಿಂಗಳಿನಲ್ಲಿಯೂ ಮಳೆ ಹೆಚ್ಚು ಬೀಳುವ ಸಾಧ್ಯತೆ ಇದೆ. ವಾಡಿಕೆ ಪ್ರಕಾರವೂ ಮಳೆಯಾಗಲಿದೆ ಎಂದರು.
ಮಳೆಯಿಂದ ಬಾಧಿತವಾದ ಪ್ರದೇಶಗಳಿಗೆ ಭೇಟಿ ನೀಡಿ ಜಿಲ್ಲಾಡಳಿತವನ್ನು ಚುರುಕುಗೊಳಿಸಿ ಮಳೆ ಪ್ರವಾಹ ಸಂದರ್ಭದಲ್ಲಿ ಜನರ ನೆರವಿಗೆ ಬರುವುದು ನಮ್ಮ ಸರ್ಕಾರದ ಕರ್ತವ್ಯವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಅವರವರ ಜಿಲ್ಲೆಯಲ್ಲಿ ಸರ್ಕಾರದಿಂದ ತ್ವರಿತ ಕ್ರಮ ಕೈಗೊಳ್ಳುವಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವರ್ಷ ಮಳೆ ಬೀಳುವ ಕುರಿತ ಮಾಹಿತಿಯನ್ನು ಮುಂಚಿತವಾಗಿಯೇ ನೀಡುತ್ತಿದ್ದೇವೆ. ನೀರು ಹರಿವು ಯಾವ ಹೆಚ್ಚಾಗಲಿದೆ, ಯಾವ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತದೆ, ಇದರಿಂದ ಎಷ್ಟು ಗ್ರಾಮಗಳಿಗೆ ತೊಂದರೆಯಾಗಬಹುದು ಎಂಬ ಅಂದಾಜು ಮಾಡಿಸಿ ಮೊದಲೇ ತಿಳಿಸಿ ಮುನ್ನೆಚ್ಚರಿಕೆ ಕ್ರಮಗಳ:ನ್ನು ತೆಗೆದುಕೊಳ್ಳುತ್ತೀದ್ದೇವೆ ಎಂದು ಸಚಿವರು ತಿಳಿಸಿದರು.
ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮಳೆ ಸಂಬಂಧಿ ಘಟನೆಯಲ್ಲಿ ಮಡಿದವರ ಸಂಖ್ಯೆ ಈ ವರ್ಷದಲ್ಲಿ ಕಡಿಮೆಯಾಗಿದೆ. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಸಕ್ರಿಯವಾಗಿ ಕೆಲಸ ಮಾಡಿದ್ದೆವೆ. ರಾಜ್ಯದ ನಾನಾ ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಜೂನ್ ಜುಲೈ ಸೇರಿ ವಾಡಿಕೆಗಿಂತ ಶೇ. 31ರಷ್ಟು ಅಧಿಕ ಮಳೆ ಸುರಿದಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
ಇದಕ್ಕೂ ಮೊದಲು ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಂ.ಆರ್. ಮಂಜುನಾಥ್, ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಪ್ರವಾಹ ಸ್ಥಿತಿ ಕುರಿತು ಸಚಿವರಿಗೆ ವಿವರಿಸಿದರು. ಸ್ಥಳೀಯ ಜನರು ತಡೆಗೋಡೆ ನಿರ್ಮಾಣ ಮಾಡಬೇಕು. ಪದೇ ಪದೇ ಪ್ರವಾಹದಿಂದ ಉಂಟಾಗುವ ಸಂಕಷ್ಟಗಳಿಗೆ ಪರಿಹಾರ ದೊರೆಯಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು ಶಾಶ್ವತ ಪರಿಹಾರ ಕ್ರಮಗಳಿಗೆ ಮುಂದಾಗುವ ನಿಟ್ಟಿನಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಮೋನಾ ರೊತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಉಪವಿಭಾಗಾಧಿಕಾರಿ ಮಹೇಶ್, ತಹಶೀಲ್ದಾರ್ ಮಂಜುಳಾ, ಇತರರು ಇದ್ದರು.