ಸಚಿವ ಸಂಪುಟದ ಮುಂದಿರಿಸಿ ಸಾಮಾಜಿಕ ಗಣತಿ ವರದಿ ಜಾರಿಗೆ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ
ಸಂಜೆವಾಣಿ ನ್ಯೂಸ್
ಮೈಸೂರು,:ಸೆ.30:- ಇನ್ನೂ ಸೌಲಭ್ಯಗಳಿಂದ ವಂಚಿತರಾಗಿರುವ ಜನರನ್ನು ಗುರುತಿಸುವ ಉದ್ದೇಶದಿಂದಲೇ ನಮ್ಮ ಸರ್ಕಾರ ಸಾಮಾಜಿಕ ಗಣತಿಯನ್ನು ನಡೆಸಿದ್ದು, ಮುಂದಿನ ದಿನಗಳಲ್ಲಿ ಈ ವರದಿಯನ್ನು ಸಚಿವ ಸಂಪುಟದ ಮುಂದಿರಿಸಿ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.
ಭಾನುವಾರ ಮೈಸೂರಿನಲ್ಲಿ ಹಿಂದುಳಿದ ವರ್ಗಗಳ ವಸತಿ ನಿಲಯಗಳ ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಗಣತಿ ವರದಿಯನ್ನು ಸರ್ಕಾರ ಸ್ವೀಕರಿಸಿದ್ದು, ಆದರೆ ಹಲವು ಕಾರಣದಿಂದ ಆ ವರದಿ ಇನ್ನೂ ಜಾರಿಯಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಈ ವರದಿಯನ್ನು ಸಚಿವ ಸಂಪುಟದ ಮುಂದಿರಿಸಿ ಜಾರಿಗೆ ಕ್ರಮಕೈಗೊಳ್ಳಲಾಗುವುದು. ಜಾತಿ ಜನಗಣತಿ ಕಾಂಗ್ರೆಸ್ ಪಕ್ಷದ ಸಿದ್ದಾಂತವೂ ಆಗಿದೆ. ದೇಶದಲ್ಲಿ ಜನಸಂಖ್ಯೆಯ ಗಣತಿಯೊಂದಿಗೆ ಜಾತಿ ಗಣತಿ ಕಾರ್ಯ 1930ರ ನಂತರ ಆಗಿಲ್ಲ. ಈಗ ಎಲ್ಲಾ ರಾಜ್ಯಗಳಲ್ಲಿ ಜಾತಿ ಗಣತಿ ಕುರಿತು ಚರ್ಚೆ ನಡೆಯುತ್ತಿದೆ ಎಂದು ವಿವರಿಸಿದರು.
ಹಿಂದುಳಿದವರಿಗೆ , ದಲಿತ- ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ ದೊರೆಯಬೇಕೆಂಬುದು ಸಂವಿಧಾನ ರಚಿಸಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಉದೇಶವಾಗಿತ್ತು. ಅವಕಾಶಗಳಿಂದ ವಂಚಿತರಾಗಿರುವುದರಿಂದಲೇ ಈ ಅಸಮಾನತೆ ಸೃಷ್ಟಿಯಾಗಿದ್ದು, ಎಲ್ಲರಿಗೂ ಸಮಾನ ಅವಕಾಶವನ್ನು ಸಂವಿಧಾನದ ಮೂಲಕ ಕಲ್ಪಿಸಲು ಅವರು ಪ್ರಯತ್ನಿಸಿದರು. ಸಾಮಾಜಿಕ ಜವಾಬ್ದಾರಿಯನ್ನು ಈ ತಲೆಮಾರಿನಲ್ಲಿ ಮೂಡಿಸುವ ಉದ್ದೇಶದಿಂದ ಸಂವಿಧಾನ ಪೀಠಿಕೆ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ರಾಜ್ಯದಾದ್ಯಂತ ನಾವು ಮಾಡಿದ್ದೇವೆ ಎಂದರು.
ವೈಜ್ಞಾನಿಕ ಮನೋಭಾವವನ್ನು ಬೆಳೆಸಿ ಉತ್ತಮ ಮಾನವರಾಗಿ ರೂಪಿಸುವಂತಹ ಶಿಕ್ಷಣವೇ ಗುಣಮಟ್ಟದ ಶಿಕ್ಷಣವಾಗಿದೆ. ಜಾತಿ ವ್ಯವಸ್ಥೆ, ಕಂದಾಚಾರ, ಮೌಢ್ಯಗಳಿಂದ ಮುಕ್ತರಾಗಿ ಕುವೆಂಪು ಹೇಳಿದ ಹಾಗೆ ವಿಶ್ವ ಮಾನವರಾಗಬೇಕಿದೆ. ವೈಜ್ಞಾನಿಕತೆ, ವೈಚಾರಿಕತೆ, ಸಮಾಜಮುಖಿಯಾದ ಜವಾಬ್ದಾರಿ ಬೆಳೆಯದೆ ಹೋದರೆ ವಿದ್ಯೆ ದೊರೆತು ಏನು ಪ್ರಯೋಜನ. ಪ್ರತಿಯೊಬ್ಬರೂ ಸಮಾಜ ಮುಖಿಯಾಗಿ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂದು ಯೋಚಿಸಬೇಕಿದೆ ಎಂದು ಹೇಳಿದರು.
ಶಿಕ್ಷಣ ಕಡ್ಡಾಯವಾಗಿ ಸಿಗಬೇಕು. ಕಡ್ಡಾಯವಾಗಿ ಶಿಕ್ಷಣ ಸಿಗಬೇಕಾದರೆ ವಿದ್ಯಾರ್ಥಿನಿಲಯ ಬೇಕಿದೆ. ಸಮಾಜದಲ್ಲಿ ಬಹಳ ದೊಡ್ಡ ತಾರತಮ್ಯ, ಜಾತಿ ವ್ಯವಸ್ಥೆಯಿದೆ. ಜಾತಿ ವ್ಯವಸ್ಥೆ ಕಾರಣದಿಂದ ಬಹುಸಂಖ್ಯಾತ ಮಂದ ಅಕ್ಷರ ಸಂಪತ್ತಿನಿಂದ ವಂಚಿತರಾಗಿದ್ದು, ಇದರಿಂದ ಅವಕಾಶಗಳಿಂದಲೂ ವಂಚಿತರಾಗಿದ್ದಾರೆ. ಇದರಿಂದ ಆರ್ಥಿಕ, ಸಾಮಾಜಿಕ ಅಸಮಾನತೆ ಕಾರಣವಾಯಿತು. ದೇವರು ಜಾತಿ ವ್ಯವಸ್ಥೆ ಮಾಡಲಿಲ್ಲ. ನಾವೇ ಮಾಡಿಕೊಂಡಿದ್ದೇವೆ. ದೇವರು ಎಲ್ಲರೂ ಸಮಾನರಾಗಿರಿ, ಮನುಷ್ಯರಾಗಿರಿ ಎಂದಿದ್ದರು. ಅವಕಾಶ ಸಿಕ್ಕವರು ಮೇಲೆ ಬರಲು ಸಾಧ್ಯವಾಯಿತು. ಅವಕಾಶ ಸಿಗದ ದಲಿತರು, ಹಿಂದುಳಿದವರಾಗಲು ಕಾರಣವಾಯಿತೆಂದು ಸ್ಮರಿಸಿಕೊಂಡರು.
ಹಿಂದುಳಿದ ವರ್ಗ , ಪರಿಶಿಷ್ಟ ಜಾತಿ ಪರಿಶಿಷ್ಠ ಪಂಗಡ, ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣ ಕಡ್ಡಾಯವಾಗಿ ದೊರೆಯಬೇಕು. ಈ ನಿಟ್ಟನಲ್ಲಿ ವಿದ್ಯಾರ್ಥಿ ನಿಲಯಗಳು ಅತ್ಯಾವಶ್ಯಕ. ಜಾತಿ ವ್ಯವಸ್ಥೆ ಆರ್ಥಿಕ, ಸಾಮಾಜಿಕ ಅಸಮಾನತೆಗೆ ಕಾರಣವಾಗಿದ್ದು, ದುರ್ಬಲ ವರ್ಗದ ಜನರು ಅವಕಾಶದಿಂದಲೂ ವಂಚಿತರಾಗುತ್ತಿದ್ದಾರೆ. ಸಮಾನ ಅವಕಾಶಗಳು ದೊರೆಯುವ ಮೂಲಕ ತುಳಿಕ್ಕೊಳಗಾದವರು ಜೀವನದಲ್ಲಿ ಅಭಿವೃದ್ಧಿ ಹೊಂದುವಂತಾಗಬೇಕು. ಯಾವುದೇ ಜಾತಿ ಧರ್ಮಗಳು ಕರ್ಮಸಿದ್ಧಾಂತವನ್ನು ಪ್ರತಿಪಾದಿಸುವುದಿಲ್ಲ. ಇತಿಹಾಸ ತಿಳಿದವರು ಮಾತ್ರ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂಬುದನ್ನು ಡಾ.ಬಿ.ಆರ್.ಅಂಬೇಡ್ಕರ್ ರವರು ತಿಳಿಸಿದ್ದಾರೆ. ಎಲ್ಲರೂ ಸರಿಸಮಾನರಾಗಿ ಬಾಳಿದಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದು ಬುದ್ಧ ಬಸವಾದಿ ಶರಣರು ಹಾಗೂ ಅಂಬೇಡ್ಕರ್, ಗಾಂಧಿಜೀ ಅವರ ಪ್ರತಿಪಾದನೆಯಾಗಿತ್ತು ಎಂದರು.
1977 ವಿದ್ಯಾರ್ಥಿ ನಿಲಯಗಳು ಪ್ರಾರಂಭ: ಸಂವಿಧಾನ ಜಾರಿಯಾಗುವ ಮೊದಲೇ ಮೈಸೂರು ರಾಜ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದಲ್ಲಿ ಮೀಸಲಾತಿಯನ್ನು ಜಾರಿಗೆ ತರಲಾಗಿತ್ತು. 1960 ರಲ್ಲಿ ನಾಗೇಗೌಡ ಸಮಿತಿ ರಚನೆಯಾಯಿತು. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾವನೂರು ಆಯೋಗ ರಚಿಸಲಾಯಿತು. ವರದಿಗೆ ವಿರೋಧದ ನಡುವೆಯೂ ಜಾರಿಗೆ ತರಲಾಯಿತು. 1977 ರಲ್ಲಿ ಹಿಂದುಳಿದ ವರ್ಗಗಳ ಮಕ್ಕಳಿಗೆ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲಾಯಿತು. ವಿದ್ಯಾರ್ಥಿನಿಲಯಗಳಲ್ಲಿ ಶೇ.75 ರಷ್ಟು ಹಿಂದುಳಿದ ಜಾತಿಗಳ ಮಕ್ಕಳಿದ್ದರೆ, ಶೇ.25 ರಷ್ಟು ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ಮಕ್ಕಳಿದ್ದಾರೆ. 1,87,000 ವಿದ್ಯಾರ್ಥಿಗಳು ಇಂದು ವಿದ್ಯಾರ್ಥಿನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದರು.
ವಿದ್ಯಾರ್ಥಿಜೀವನ ನೆನೆದ ಸಿಎಂ:
ನಾನು ಓದುವಾಗ ಮೀಸಲಾತಿ ವ್ಯವಸ್ಥೆ ಇಲ್ಲದಿದ್ದ ಕಾರಣ, ಉನ್ನತ ಶಿಕ್ಷಣಕ್ಕೆ ಅವಕಾಶ ದೊರಕಲಿಲ್ಲ. ಪಿಯುಸಿ, ಪದವಿ ಮಾಡುವ ಸಂದರ್ಭದಲ್ಲಿ ವಸತಿ ವ್ಯವಸ್ಥೆ ಇಲ್ಲದೇ, ನಾನೇ ಒಂದು ರೂಂ ಮಾಡಿಕೊಂಡು ಓದುತ್ತಿದ್ದೆ. ಆದ್ದರಿಂದ ವಿದ್ಯಾರ್ಥಿಗಳ ಕಷ್ಟಗಳ ಬಗ್ಗೆ ಅರಿತಿದ್ದ ನಾನು ವಿದ್ಯಾಸಿರಿ ಯೋಜನೆಯನ್ನು ಜಾರಿಗೆ ತಂದಿರುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಕಾನೂನು ಪದವಿ ಓದಲು ತಾನು ಮಾಡಿದ ಸಂಘರ್ಷಗಳನ್ನೂ ವಿವರಿಸಿದರು.
ವಿದ್ಯಾರ್ಥೀ ವೇತನ ಹೆಚ್ಚಳ:
ವಿದ್ಯಾರ್ಥಿ ನಿಲಯಗಳಲ್ಲಿ ಪೌಷ್ಟಿಕ ಆಹಾರ ದೊರಕಿಸುವ ಉದ್ದೇಶದಿಂದ ಮುಂಚೆ ಇದ್ದ 750 ರೂ ವಿದ್ಯಾರ್ಥಿ ವೇತನವನ್ನು 1750 ರೂ.ಗಳಿಗೆ ಹೆಚ್ಚಿಸಲಾಗಿದೆ. ಹಾಸ್ಟೆಲ್ ಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ಲಭಿಸಿದಾಗ ಮಾತ್ರ ಉತ್ತಮ ಜ್ಞಾನಾರ್ಜನೆ ಮಾಡಲು ಸಾಧ್ಯ. 2024-25 ರಲ್ಲಿಯೂ ಕೂಡ ವಿದ್ಯಾರ್ಥಿ ವೇತನವನ್ನು 1850 ರೂ.ಗಳಿಗೆ ಪುನ: ಹೆಚ್ಚಿಸಲಾಗಿದೆ ಎಂದು ವಿವರಿಸಿದರು.
ಮುಂದಿನ ಸಾಲಿಗೆ ಹೋಬಳಿಗೊಂದು ವಸತಿ:
ನಾನು ಹಣಕಾಸು ಮಂತ್ರಿಯಾಗಿದ್ದಾಗ , ದಲಿತ ಸಂಘರ್ಷ ಸಮಿತಿಯವರು ಸಾರಾಯಿ ಅಂಗಡಿ ಬೇಡ, ಮಕ್ಕಳಿಗೆ ವಸತಿ ಶಾಲೆ ನಿರ್ಮಾಣವಾಗಬೇಕೆಂಬ ಬೇಡಿಕೆಯನ್ನಾಧರಿಸಿ, 1994-95 ರಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಪ್ರಾರಂಭಿಸಲಾಯಿತು. ಹೋಬಳಿಗೊಂದು ವಸತಿ ಶಾಲೆ ಯೋಜನೆಯಂತೆ ರಾಜ್ಯದಲ್ಲಿ ಒಟ್ಟು 822 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ನಿರ್ಮಿಸಲಾಗಿದೆ. ಈ ವರ್ಷ 20 ವಸತಿ ಶಾಲೆ ನಿರ್ಮಿಸಲು ತೀರ್ಮಾನಿಸಲಾಗಿದೆ. ಹಳ್ಳಿಗಾಡಿನ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಮುಂದಿನ ವರ್ಷದೊಳಗೆ ಉಳಿದೆಲ್ಲ ಹೋಬಳಿಗಳಲ್ಲೂ ರಾಜ್ಯದ ಪ್ರತಿ ಹೋಬಳಿಯಲ್ಲಿ ಒಂದು ವಸತಿ ಶಾಲೆ ನಿರ್ಮಿಸುವ ಗುರಿಯನ್ನು ಸಾಧಿಸುವುದಾಗಿ ಹೇಳಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಹತ್ತನೆ ತರಗತಿಯಲ್ಲಿ ಓದುವ ಮಕ್ಕಳಿಗೆ ವಾರಕ್ಕೆ ಆರು ದಿನ ಮೊಟ್ಟೆ ನೀಡಲಾಗುತ್ತಿದೆ. ಅನ್ನಭಾಗ್ಯದಡಿ 5 ಕೆಜಿ ಅಕ್ಕಿ, ಕ್ಷೀರಭಾಗ್ಯ ಕಾರ್ಯಕ್ರಮ, ಬಡಮಕ್ಕಳಿಗೆ ಶೂ ಭಾಗ್ಯ ಸೇರಿ ಹಲವು ಜನಪರ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಸಂಘದ ಅಧ್ಯಕ್ಷ ಕೆಎಎಸ್ ಅಧಿಕಾರಿ ಕೆ.ಶಿವಸ್ವಾಮಿ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ, ವಿಧಾನಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಶಾಸಕರಾದ ದರ್ಶನ್ ದ್ರುವ ನಾರಾಯಣ್, ತನ್ವೀರ್ ಸೇಠ್, ಅನಿಲ್ ಚಿಕ್ ಮಾದು, ರವಿಶಂಕರ್, ಹರೀಶ್ ಗೌಡ, ಸರ್ಕಾರದ ಜಂಟಿ ಕಾರ್ಯದರ್ಶಿ ನಿವೃತ್ತ ಹಿರಿಯ ಕೆಎಎಸ್ ಅಧಿಕಾರಿ ಎಂ.ರಾಮಯ್ಯ, ಬಿಡಿಎ ಆಯುಕ್ತರಾದ ಹಿರಿಯ ಐಎಎಸ್ ಅಧಿಕಾರಿ ಜಯರಾಮ್ ಸೇರಿ ಹಲವರು ಉಪಸ್ಥಿತರಿದ್ದರು.
