ಕೇಂದ್ರ ಬಜೆಟ್ ವಿಕಸಿತ ಭಾರತ ಅನ್ವೇಷಣೆಗೆ ಮುನ್ನುಡಿ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೨: ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2024-25ನೇ ಸಾಲಿನ ಮುಂಗಡ ಪತ್ರ ವಿಕಸಿತ ಭಾರತ ಅನ್ವೇಷಣೆ ಗೆ ಮುನ್ನುಡಿ ಬರೆದಿದೆ ಎಂದು ಬಿಜೆಪಿ ರಾಜ್ಯ ಪ್ರಬುದ್ಧ ಪ್ರಕೋಷ್ಠದ ರಾಜ್ಯ ಕಾರ್ಯಕಾರಣಿ ಸದಸ್ಯ ಎನ್. ಲೋಕೇಶ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಬಡವರ, ಮಹಿಳೆಯರ, ಯುವಕರ ಹಾಗೂ ರೈತರ ಈ ನಾಲ್ಕು ವರ್ಗಗಳ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳು ಬಜೆಟ್ ನಲ್ಲಿ ತರಲಾಗಿದೆ. ಪ್ರಮುಖವಾಗಿ ದೇಶದ ಆರ್ಥಿಕ ಭದ್ರತೆ ಗೆ ಬುನಾದಿ ಹಾಕಿದೆ ಎಂದುರು.ಸುಮಾರು 5000 ಕಂಪನಿಗಳಲ್ಲಿ ಒಂದು ಕೋಟಿ ಯುವಕರಿಗೆ ಇಂಟರ್ನಶಿಪ್, ಪಿಎಂ ಅವಾಸದಲ್ಲಿ ಮೂರು ಕೋಟಿ ಮನೆಗಳ ನಿರ್ಮಾಣ, ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ಅನುದಾನ, 1 ಕೋಟಿ ಮನೆಗಳಿಗೆ ಸೋಲಾರ ಪ್ಯಾನೆಲ್ ಯೋಜನೆ, ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರದ ಅಭಿವೃದ್ಧಿ ಗೆ 1.53 ಲಕ್ಷ ಕೋಟಿ ಅನುದಾನ ಸೇರಿ ಇತರ ಕಾರ್ಯಗಳು ಅಭಿವೃದ್ಧಿ ಪೂರಕವಾಗಿದೆ ಎಂದು ತಿಳಿಸಿದರು.ಕೃಷಿ, ಉದ್ಯೋಗ ಮತ್ತು ಕೌಶಲ್ಯ, ಮಾನವ ಸಂಪನ್ಮೂಲ- ಸಾಮಾಜಿಕ ನ್ಯಾಯ, ಉತ್ಪಾದನೆ ಮತ್ತು ಸೇವೆ, ನಗರಾಭಿವೃದ್ಧಿ, ಇಂಧನ ಭದ್ರತೆ, ಮೂಲಸೌಕರ್ಯ ಅಭಿವೃದ್ಧಿ, ನಾವೀನ್ಯತೆ ಹಾಗೂ ಹೊಸ ಪೀಳಿಗೆ ಸುಧಾರಣೆ ಎಂಬುದಾಗಿ 9 ಆದ್ಯತಾ ವಲಯಗಳೆಂದು ಗುರುತಿಸಿರುವುದು ಹೊಸ ಮೈಲುಗಲ್ಲಾಗಿದೆ ಎಂದರಲ್ಲದೆ, ಬಜೆಟ್ ನ ಪ್ರಮುಖ ಮುಖ್ಯಾಂಶಗಳನ್ನು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ, ಬಿಜೆಪಿ ಮುಖಂಡರಾದ ಕೃಷ್ಣಕುಮಾರ್, ಅನಿಲ್ ಕುಮಾರ್, ಎಸ್.ಹೆಚ್.  ಲಿಂಗರಾಜು, ಕೆ.ಜಿ. ಕಲ್ಲಪ್ಪ, ಆರ್. ಶಿವಾನಂದ್ ಶಿವನಗೌಡ ಪಾಟೀಲ್ ಉಪಸ್ಥಿತರಿದ್ದರು.