ಶಿಶು ಮರಣ ತಡೆಗಟ್ಟುವಲ್ಲಿ ಗಮನಾರ್ಹ ಪ್ರಗತಿ ಸಾಧನೆ- ಡಾ.ಸಿದ್ಧನಗೌಡ ಪಾಟೀಲ್
ಸಂಜೆವಾಣಿ ವಾರ್ತೆ
ಶಿವಮೊಗ್ಗ : ಆ.೩ : ಜಿಲ್ಲಾಸ್ಪತ್ರೆಯಲ್ಲಿ ಶಿಶು ಆರೈಕೆ ಬಗ್ಗೆ ಸುಸಜ್ಜಿತ ವ್ಯವಸ್ಥೆ ಮತ್ತು ತಜ್ಞ ವೈದ್ಯರುಗಳಿಂದ ಸೇವೆ ಒದಗಿಸಲಾಗುತ್ತಿದೆ.  ಇತ್ತೀಚಿನ ಶಿಶು ಮರಣದ ಅಂಕಿ-ಅಂಶಗಳನ್ನು ಪರಿಗಣಿಸಿದಾಗ ಶಿಶು ಮರಣ ತಡೆಗಟ್ಟುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದೇವೆ. ಹಿಂದಿನ ವರ್ಷಗಳಲ್ಲಿ ೨೦-೨೫ ಇದ್ದ ಶಿಶು ಮರಣ ಪ್ರಮಾಣವನ್ನು ೬ ರಿಂದ ೭ ಕ್ಕೆ ತರಲಾಗಿದೆ. ಇದಕ್ಕೆ ಕಾರಣ ತಜ್ಞ ವೈದ್ಯರು ಮತ್ತು ಎಲ್ಲಾ ಸಿಬ್ಬಂದಿಗಳು ಎಂದು ತಿಳಿಸಿದರು. ಜಿಲ್ಲಾ ಆಸ್ಪತ್ರೆಯಲ್ಲಿ ತಾಯಿಯ ಎದೆಹಾಲು ಸಂಗ್ರಹಣ ನಿಧಿ ಸ್ಥಾಪಿಸಲಾಗಿದ್ದು, ಇದಕ್ಕೆ ತಾಯಂದಿರೇ ಹಾಲಿನ ದಾನಿಗಳಾಗಿರುತ್ತಾರೆ. ಇಲ್ಲಿಯವರೆಗೆ ಒಟ್ಟು ೫೬ ಲೀಟರ್ ತಾಯಿ ಹಾಲು ಸಂಗ್ರಹಣೆಯಾಗಿದೆ.  ೩೮ ಲೀಟರ್‌ನಷ್ಟು ಎದೆಹಾಲನ್ನು ಮಕ್ಕಳಿಗೆ ನೀಡಲಾಗಿದೆ ಎಂದು ಜಿಲ್ಲಾ ಶಸ್ತçಚಿಕಿತ್ಸಕರಾದ ಡಾ. ಸಿದ್ದನಗೌಡ ಪಾಟೀಲ್ ತಿಳಿಸಿದರು. ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತುಜಿಲ್ಲಾ ಪಂಚಾಯತ್,ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ಮೆಗ್ಗಾನ್ ಬೋಧಾನ ಜಿಲ್ಲಾ ಆಸ್ಪತ್ರೆ, ಶಿವಮೊಗ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕರ್ನಾಟಕದಲ್ಲಿ ಬೆಂಗಳೂರು ಮತ್ತು ಮಂಗಳೂರು ಹೊರತುಪಡಿಸಿದರೆ ಶಿವಮೊಗ್ಗದಲ್ಲಿ ಮಾತ್ರ ಮಿಲ್ಕ್ ಬ್ಯಾಂಕ್ ವ್ಯವಸ್ಥೆ ಇರುತ್ತದೆ. ಇದು ಕೂಡ ಶಿಶುಮರಣ ತಡೆಗಟ್ಟುವಲ್ಲಿ ಬಹಳ ಪ್ರಮುಖವಾಗಿದೆ.  ಇದರ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ತಾಯಂದಿರಲ್ಲಿ ಮಗುವಿನ ಅಗತ್ಯಕ್ಕಿಂತ ಹೆಚ್ಚು ಹಾಲು ಉತ್ಪತ್ತಿಯಾಗುತ್ತಿದ್ದರೆ ಅಂತವರು ಎದೆ ಹಾಲನ್ನು ಮಿಲ್ಕ್ ಬ್ಯಾಂಕ್‌ಗೆ ದಾನ ಮಾಡುವಂತೆ ಅವರು ಕರೆ ನೀಡಿದರು.