ಶ್ರಮದ ಬೆವರಿನ ಫಲ ಶಾಶ್ವತ ಸುಖದಾಯಕ : ಶ್ರೀ ರಂಭಾಪುರಿ ಜಗದ್ಗುರುಗಳು
ಸಂಜೆವಾಣಿ ವಾರ್ತೆ
ದಾವಣಗೆರೆ- ಆ.೩; ಮನುಷ್ಯ ಜೀವನದಲ್ಲಿ ಬದಲಾವಣೆ ಬೆಳವಣಿಗೆ ಎರಡೂ ಅವಶ್ಯಕ. ಶ್ರಮದ ಬೆವರಿನ ಫಲ ಶಾಶ್ವತ ಮತ್ತು ಸುಖದಾಯಕ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು  ನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಭವನದಲ್ಲಿ ಶ್ರೀಮದ್ವೀರಶೈವ ಸದ್ಯೋಧನ ಸಂಸ್ಥೆ ಸಂಘಟಿಸಿದ ಜನಜಾಗೃತಿ ಧರ್ಮ ಸಮಾವೇಶದ 4ನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಆದರ್ಶಗಳೇ ದಾರಿದೀಪ, ಪ್ರಗತಿಪರವಾದ ಧೈಯೋದ್ದೇಶಗಳು ಮಾನವ ಜೀವನದ ಉನ್ನತಿಗೆ ಸಹಕಾರಿಯಾಗಿವೆ. ದೇಹವನ್ನು ದುಡಿಮೆಗೆ ಮತ್ತು ಮನಸ್ಸನ್ನು ಭಗವಂತನಿಗೆ ಅರ್ಪಿಸಿ ನಡೆದಾಗ ಬದುಕು ಉಜ್ವಲಗೊಳ್ಳುತ್ತದೆ. ಸಮಾಜದ ಓರೆ ಕೋರೆಗಳನ್ನು ತಿದ್ದಿ ತೀಡಿ ಮುನ್ನಡೆಸುವುದೇ ಮಹಾನುಭಾವರ ಕರ್ತವ್ಯವಾಗಿದೆ. ಸಂಪತ್ತು ಬೆಳೆದಂತೆ ಸಂಸ್ಕೃತಿ ಬೆಳೆಯಬೇಕು. ಮನುಷ್ಯನ ಬುದ್ದಿ ಶಕ್ತಿ ಬೆಳೆದಂತೆ ಭಾವನೆಗಳು ಬೆಳೆಯಲಾರದ್ದೇ ಇಂದಿನ ಎಲ್ಲ ಆವಾಂತರಗಳಿಗೆ ಕಾರಣವೆಂದರೆ ತಪ್ಪಾಗದು. ವೀರಶೈವ ಧರ್ಮದ ಸಂವಿಧಾನದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಕ್ರಿಯಾಶೀಲ ಬದುಕು ಉಜ್ವಲ ಬಾಳಿಗೆ ಸ್ಫೂರ್ತಿಯಾಗಿವೆ ಎಂದರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ವಿಧಾನ ಪರಿಷತ್ತಿನ ಮಾಜಿ ಶಾಸಕ ಡಾ.ಎ.ಎಚ್.ಶಿವಯೋಗಿಸ್ವಾಮಿಯವರು ಮಾತನಾಡಿ ಆಧ್ಯಾತ್ಮಿಕ ಮತ್ತು ಲೌಕಿಕ ಒಂದೇ ನಾಣ್ಯದ ಎರಡು ಮುಖಗಳು. ಧರ್ಮ ಆಧ್ಯಾತ್ಮಿಕತೆ ಆದರ್ಶ ಬದುಕಿಗೆ ಆಶಾಕಿರಣವಾಗಿವೆ. ಧರ್ಮದ ಆದರ್ಶ ಚಿಂತನಗಳು ಭಾರತೀಯರ ಬದುಕಿಗೆ ಸಜ್ಜನಿಕೆಯ ಜೀವ ತುಂಬಿದೆ. ಶ್ರೀ ರಂಭಾಪುರಿ ಜಗದ್ಗುರುಗಳವರ ದೂರದೃಷ್ಟಿ ಮತ್ತು ಸಾಮಾಜಿಕ ಚಿಂತನೆಗಳು ಬದುಕಿನ ವಿಕಾಸಕ್ಕೆ ಅಡಿಪಾಯವಾಗಿದೆ ಎಂದರು. ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ ಇಂತಹ ಧರ್ಮ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಕರೆ ತರಬೇಕು. ಮಕ್ಕಳಲ್ಲಿಯೂ ಧಾರ್ಮಿಕ ಭಾವನೆಗಳನ್ನು ಬೆಳೆಸುವ ಕಾರ್ಯ ಮಾಡಬೇಕು. ಯುವ ಸಮೂಹ ಧರ್ಮ ಕಾರ್ಯಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುವಂತಾಗಬೇಕು ಎಂದರು. ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ, ಅ.ಭಾ.ವೀ.ಮಹಾಸಭೆ ಜಿಲ್ಲಾಧ್ಯಕ್ಷ ಐಗೂರು ಚಂದ್ರಶೇಖರ ಅತಿಥಿಗಳಾಗಿದ್ದರು. ಖ್ಯಾತ ಕೈಗಾರಿಕೋದ್ಯಮಿ ಶಿವಗಂಗ ಶ್ರೀನಿವಾಸ ಇವರಿಗೆ ‘ಶ್ರಮ ಸೇವಾ ಸಂಜೀವಿನಿ’ ಎಂಬ ಪ್ರಶಸ್ತಿಯಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ತಾವರಕೆರೆ ಶಿಲಾಮಠದ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಮನುಷ್ಯ ಜೀವನದಲ್ಲಿ ಧರ್ಮ ದೇವರು ಮತ್ತು ಗುರುವನ್ನು ಮರೆಯಬಾರದೆಂದರು.ಈ ಪವಿತ್ರ ಸಮಾರಂಭದಲ್ಲಿ ಡಾ.ಎಸ್.ಎಸ್.ನೇತ್ರಾವತಿ, ಜಾನಪದ ಕಲಾವಿದ ಮಹೇಶ್ವರಗೌಡ ಲಿಂಗದಹಳ್ಳಿ, ಎಸ್.ಪರಮೇಶ್ವರಪ್ಪ ಬಣಕಾರ, ಜಿ.ಹೆಚ್.ನಾಗರಾಜಪ್ಪ, ವಿರೂಪಾಕ್ಷಪ್ಪ ಅಣಜಿ, ಕೆ.ವಿ.ಗುರುರಾಜ್, ವೀರಮ್ಮ ಅವರಗೊಳ್ಳ, ಪುಷ್ಪ ಅವರಗೊಳ್ಳ, ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.ಮಳಲಿ ಡಾ.ನಾಗಭೂಷಣ ಶಿವಾಚಾರ್ಯರು, ಚನ್ನಗಿರಿ ಕೇದಾರ ಶಿವಶಾಂತವೀರ ಶಿವಾಚಾರ್ಯರು,ಹನುಮಾಪುರದ ಸೋಮಶೇಖರ ಶಿವಾಚಾರ್ಯರು, ನಂದಿತಾವರೆ ಸಿದ್ದಲಿಂಗ ಶಿವಾಚಾರ್ಯರು ಉಪಸ್ಥಿತರಿದ್ದರು. ಟಿ.ಜಿ.ಸುರೇಶ ಸ್ವಾಗತಿಸಿದರು. ಪಂಚಾಕ್ಷರಯ್ಯನವರು ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಗೌರವ ಮಾಲಾರ್ಪಣೆ ಸಲ್ಲಿಸಿದರು. ಹರಿಹರದ ಕಾಂತರಾಜ-ವೀರೇಶ ಬಡಿಗೇರ ಸಂಗೀತ ಸೇವೆ ಸಲ್ಲಿಸಿದರು. ಪ್ರೊ.ಮಲ್ಲಯ್ಯ ನಿರೂಪಿಸಿದರು.ಬೆಳಗಿನ ಸಂದರ್ಭದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯವನ್ನು ಮಹಿಳೆಯರು ನೆರವೇರಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.