ಸೂಪರ್ ಮಾರ್ಕೆಟ್ ಪ್ರದೇಶಕ್ಕೆ ಲೋಕಾಯುಕ್ತ ಎಸ್‌ಪಿ ಜಾನ್ ಆಂಟೋನಿ ಭೇಟಿತುಂಬಿದ ಚರಂಡಿ, ಕಸದ ರಾಶಿ ಕಂಡು ಪಾಲಿಕೆ ಅಧಿಕಾರಿಗಳ ಮೇಲೆ ಕೆಂಡಾಮಂಡಲ
ಕಲಬುರಗಿ,ಆ.2-ಲೋಕಾಯುಕ್ತ ಎಸ್.ಪಿ.ಜಾನ್ ಆಂಟೋನಿ ಅವರು ನಗರದ ವಾರ್ಡ್ ನಂಬರ್ 24ರ ಸೂಪರ್ ಮಾರ್ಕೆಟ್ ಮೇನ್ ರೋಡ್, ಅಂಚೆ ಕಚೇರಿ, ಬಸ್ ನಿಲ್ದಾಣ ಸೇರಿದಂತೆ ಮತ್ತಿತರ ಕಡೆ ಇಂದು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚರಂಡಿಯಲ್ಲಿ ಕಸದ ರಾಶಿ, ರಸ್ತೆ ಬದಿಯಲ್ಲಿಯೇ ನಿಂತ ಮಳೆ ನೀರು, ಎಲ್ಲೆಂದರಲ್ಲಿ ಬೀಸಾಕಿದ ಪ್ಲಾಸ್ಟಿಕ್ ಕಂಡು ಮಹಾನಗರ ಪಾಲಿಕೆಯ ನೈರ್ಮಲ್ಯ ನಿರೀಕ್ಷಕ ಮಲ್ಲಿಕಾರ್ಜುನ ಅವರನ್ನು ತರಾಟೆಗೆ ತೆಗೆದುಕೊಂಡರು. ನಗರದ ಪ್ರಮುಖ ಸ್ಥಳಗಳಲ್ಲಿಯೇ ಚರಂಡಿಗಳು ಕಸದ ರಾಶಿಯಿಂದ ತುಂಬಿರುವುದು, ರಸ್ತೆ ಬದಿಯಲ್ಲಿಯೇ ಮಳೆ ನೀರು ನಿಂತಿರವುದು, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಿದ್ದಿರುವುದು ನಿಮ್ಮ ಗಮನಕ್ಕೆ ಬರುತ್ತಿಲ್ಲವೇ ? ನೀವೇನು ಕೆಲಸ ಮಾಡುತ್ತಿದ್ದೀರಿ ? ಏಕ ಬಳಕೆ ಪ್ಲಾಸ್ಟಿಕ್ ನಿಷೇಧವಿದ್ದರೂ ಇಷ್ಟೊಂದು ಪ್ಲಾಸ್ಟಿಕ್ ಬಿದ್ದಿರುವುದು ಹೇಗೆ ? ಎಷ್ಟು ಜನರಿಗೆ ದಂಡ ವಿಧಿಸಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ನಿಮ್ಮ ಕೆಲಸ ನೀವು ಸರಿಯಾಗಿ ಮಾಡಿದರೆ ಇಷ್ಟೊಂದು ಸಮಸ್ಯೆ ಕಣ್ಣಿಗೆ ಬೀಳುವುದಿಲ್ಲ. ನಿಮ್ಮ ಕೆಲಸ ನೀವು ಸರಿಯಾಗಿ ಮಾಡಿ ಎಂದು ತಾಕೀತು ಮಾಡಿದರು.
ಚರಂಡಿಗಳಲ್ಲಿ ಕಸದ ರಾಶಿ, ಕಲ್ಲು ಎಸೆದಿರುವುದನ್ನು ತೆಗೆದು ಹಾಕಲು, ಎಲ್ಲಿಯೂ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಲು ಮತ್ತು ನಗರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲು ಪಾಲಿಕೆ ಅಧಿಕಾರಿಗೆ ಸೂಚನೆ ನೀಡಿದರು.
ಪೊಲೀಸ್ ಸಿಬ್ಬಂದಿಗಳಾದ ಬಸವರಾe, ರಾಣೋಜಿ, ವಸಂತ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.