ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ:ವಿಪತ್ತು ಕಾರ್ಯಗಳಲ್ಲಿ ನಿರ್ಲಕ್ಷ್ಯತನ ಸಹಿಸಲ್ಲ158 ಗ್ರಾಮ ನೆರೆ ಹಾವಳಿಯಿಂದ ಬಾಧಿತವಾಗುವ ಸಾಧ್ಯತೆ,ಇಲ್ಲಿ ಕಟ್ಟೆಚ್ಚರ ವಹಿಸಬೇಕು:ಡಿ.ಸಿ. ಬಿ.ಫೌಜಿಯಾ ತರನ್ನುಮ್
ಕಲಬುರಗಿ:ಆ.2: ಜಿಲ್ಲೆಯಲ್ಲಿ ನೆರೆ ಹಾವಳಿಗೆ ಸಂಭವನೀಯವಾಗಿ 70 ಗ್ರಾಮ ಪಂಚಾಯತಿಯ158 ಗ್ರಾಮಗಳು ತುತ್ತಾಗುವ ಸಾಧ್ಯತೆ ಇದ್ದು, ನೇರವಾಗಿ 40,731 ಜನರು ಇದಕ್ಕೆ ಭಾದಿತರಾಗಲಿದ್ದಾರೆ. ಈ ಗ್ರಾಮಗಳಲ್ಲಿ ತೀವ್ರ‌ ಕಟ್ಟೆಚ್ಚರ ವಹಿಸಬೇಕು ಮತ್ತು ಸಾರ್ವಜನಿಕರಿಗೆ ನೆರೆ ಹಾವಳಿ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ತಿಳಿ ಹೇಳಬೇಕು ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇರಳದ ವಯನಾಡ್ ಭೂಕುಸಿತ ದುರಂತ ನಮ್ಮ ಕಣ್ಣು ಮುಂದಿದೆ. ನೆರೆ ಹಾವಳಿ ಸಂದರ್ಭದಲ್ಲಿ ಸಂಭವಿಸಬಹುದಾದ ಅನಾಹುತಗಳ ಬಗ್ಗೆ ಮುಂಚಿತವಾಗಿಯೇ ಅರಿತು ಈಗಲೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು‌ ಎಂದರು.
ನದಿ ಪಾತ್ರದ ನಿವಾಸಿಗಳಿಗೆ ನದಿಗೆ ಹೆಚ್ಚು ನೀರು ಬಿಡುವ ಮೊದಲೆ ನೀರಾವರಿ ಇಲಾಖೆಯು ಮಾಹಿತಿ ನೀಡಿ ಆಗಬಹುದಾದ ನಷ್ಟಗಳನ್ನು ತಪ್ಪಿಸಬೇಕು. ಉಜನಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಶೇ.65ರಷ್ಟು ಡ್ಯಾಂ ಭರ್ತಿಯಾಗಿದೆ. ಅಲ್ಲಿ ಮಳೆ ತೀವ್ರವಾದಲ್ಲಿ ಭೀಮೆಗೆ ಒಳ ಹರಿವು ಹೆಚ್ಚಲಿದೆ. ಭೀಮಾ ತೀರದ ಜನ ಎಚ್ಚರಿಕೆಯಿಂದಿರಬೇಕು. ಈ ಬಗ್ಗೆ ಸರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.
ಗ್ರಾಮೀಣ ಭಾಗದಲ್ಲಿ ಮಳೆಯಿಂದ ಕೆರೆ ತುಂಬಿ ಒಡೆದು ಹೋಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೆರೆ ಬಂಡ್ ಗಳನ್ನು ಈಗಲೇ ಪರಿಶೀಲಿಸಿ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಮಳೆಯಿಂದ ರಸ್ತೆ ಹಾಳಾದಲ್ಲಿ ಕೂಡಲೆ ಸರಿಪಡಿಸುವ ಕೆಲಸ ಆಗಬೇಕು. ರಸ್ತೆ ಗುಂಡಿಯಿಂದ ಅಪಘಾತಗಳು ಆಗದಂತೆ ನೋಡಿಕೊಳ್ಳಬೇಕು. ಲೋಕೋಪಯೋಗಿ ಮತ್ತು ಪಿ.ಆರ್.ಇ.ಡಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದರು.
ಮಳೆಗಾಲ ಸಂದರ್ಭದಲ್ಲಿ ಕಲಬುರಗಿ ನಗರದಲ್ಲಿ ಚರಂಡಿ ತುಂಬಿ ಮನೆಗೆ ಕೊಳಚೆ‌ ನೀರು ನುಗ್ಗುತ್ತವೆ. ಇದು ಮರುಕಳಿಸಬಾರದು. ಕಲಬುರಗಿ ಸೇರಿದಂತೆ ಜಿಲ್ಲೆಯ ಎಲ್ಲಾ ನಗರ-ಪಟ್ಟಣಗಳಲ್ಲಿ ಕೂಡಲೆ‌ ಚರಂಡಿ ಸ್ವಚ್ಛಗೊಳಿಸಬೇಕು. ಸಾರ್ವಕನಿಕರಿಗೆ ಕಲುಷಿತ ಕುಡಿಯುವ ನೀರು ಪೂರೈಕೆಯಾಗದಂತೆ‌ ಎಚ್ಚರ ವಹಿಸಬೇಕು. ಪಾಲಿಕೆ ಇಂಜಿನೀಯರ್ ಗಳು ನಗರದಲ್ಲಿ ವಾರ್ಡ್ ವಾರು ಖುದ್ದು ಭೇಟಿ ನೀಡಿ‌ ಸಮಸ್ಯೆ ಅರಿಯಬೇಕು ಎಂದು ಡಿ.ಸಿ. ನಿರ್ದೇಶನ ನೀಡಿದರು.
ಯಾವುದೇ ಕಟ್ಟಡ ಹಾನಿಯಾಗಿಲ್ವಾ?:ಮಳೆಗಾಲ ಅರಂಭವಾಗಿದ್ದರೂ ಇದೂವರೆಗೆ ಯಾವುದೇ ಇಲಾಖೆಯಿಂದ ಮಳೆಯಿಂದ ಹಾನಿಯಾದ ರಸ್ತೆ, ಅಂಗನವಾಡಿ, ಶಾಲಾ, ವಿದ್ಯುತ್ ಕಂಬಗಳ ದುರಸ್ತಿ ಬಗ್ಗೆ ಪ್ರಸ್ತಾವನೆ ಬಂದಿಲ್ಲ. ಹಾಗಾದರೆ ಜಿಲ್ಲೆಯಲ್ಲಿ ಎಲ್ಲಿಯೂ ಏನು ಸಮಸ್ಯೆ ಇಲ್ಲವಾ ಎಂದು ಅಧಿಕಾರಿಗಳಿಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಖಾರವಗಿಯೇ ಪ್ರಶ್ನಿಸಿದರು.
ಶಾಲಾ-ಅಂಗನವಾಡಿ ಕಟ್ಟಡ ಎಲ್ಲಿಯೇ ಕುಸಿತ, ಶಿಥಿಲದಿಂದ ಛಾವಣಿ, ಛಾವಣಿಯ ಪದರು ಬಿದ್ದ ಅವಘಡ ಸಂಭವಿಸಿದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನೆ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಹೀಗಾಗಿ ಕೂಡಲೆ ಅಂತಹ ಕಟ್ಟಡದಲ್ಲಿರುವ ಮಕ್ಕಳನ್ನು ಸುಸ್ಥಿತಿಯಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದರು.
ಸಭೆಗೆ ಬಹುತೇಕ ತಾಲೂಕಾ ಮಟ್ಟದ ಅಧಿಕಾರಿಗಳ ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಗೈರಾಗಿರುವುದಕ್ಕೆ ಡಿ.ಸಿ. ತೀವ್ರ ಅಸಮಾಧಾನ ವ್ಯಕ್ತಪಡಿಸಿ ಗೈರಾದವರಿಗೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ನೋಟಿಸ್ ಜಾರಿಗೊಳಿಸುವಂತೆ ತಮ್ಮ ಕಚೇರಿಯ ಸಿಬ್ಬಂದಿಗಳಿಗೆ ಡಿ.ಸಿ. ಖಡಕ್ ಸೂಚನೆ ನೀಡಿದರು.
ಮೂರು ದಿನದಲ್ಲಿ ಗ್ರಾಮ ಸಭೆ ಮಾಡಿ:
ಅಫಜಲಪೂರ ಸೇರಿದಂತೆ ನದಿ ಪಾತ್ರದಲ್ಲಿರುವ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಮುಂದಿನ 3 ದಿನದಲ್ಲಿ ಗ್ರಾಮ ಸಭೆ ನಡೆಸಿ ಪ್ರವಾಹ ಪರಿಸ್ಥಿತಿ ಎದುರಾದಲ್ಲಿ ತೆಗೆದುಕೊಳ್ಳಬೇಕಾದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ತಹಶೀಲ್ದಾರರಿಗೆ ಡಿ.ಸಿ. ಸೂಚನೆ ನೀಡಿದರು. ನೆರೆ ಹಾವಳಿಯಿಂದ ಯಾವುದೇ ಮಾನವ, ಪ್ರಾಣಿ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ನದಿ ಪಾತ್ರದ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಬೇಕು. ಬೆಳಕಿನ ವ್ಯವಸ್ಥೆ ಮಾಡಿ ಎಂದರು.
ಪರಿಹಾರ ವಿತರಣೆ ತ್ವರಿತವಾಗಲಿ:ಮಳೆಗೆ ಭಾಗಶ: ಮನೆ ಹಾನಿಯಾದಲ್ಲಿ ಹಾನಿಯ ಪ್ರಮಾಣಕ್ಕನುಸಾರ ಗರಿಷ್ಠ 50 ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ಇದು ವಿ.ಎ, ಪಿ.ಡಿ.ಓ ಹಾಗೂ ಪಿ.ಆರ್.ಇ.ಡಿ ಜ್ಯೂನಿಯರ್ ಇಮಜಿನೀಯರಗಳ ವರದಿ ಆಧಾರದ ಮೇಲೆ ತಹಶೀಲ್ದಾರರು ತಕ್ಷಣವೇ ಪರಿಹಾರ ವಿತರಿಸಬೇಕು. ಪೂರ್ಣ ಹಾನಿಯಾದಲ್ಲಿ 1.20 ಲಕ್ಷ ರೂ. ರಾಜೀವ ಗಾಂಧಿ ವಸತಿ ನಿಗಮದ ಪೋರ್ಟಲ್ ನಲ್ಲಿ ಎಂಟ್ರಿ ಮಾಡಿ ನೀಡಲಾಗುತ್ತದೆ. ಇದೂವರೆಗೆ 186 ಮನೆಗಳು ಹಾನಿಯಾಗಿದ್ದು, ಜಂಟಿ ಸರ್ವೆಯ ವರದಿ ಬಂದಿಲ್ಲ, ನಾಳೆಯೊಳಗೆ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿದರು. ಸಂತ್ರಸ್ತರಿಗೆ ಪರಿಹಾರ ವಿತರಣೆ ತ್ವರಿತಗತಿಯಲ್ಲಿ ಆಗಬೇಕು. ಕೃಷಿ, ತೋಟಗಾರಿಕೆ ಬೆಳೆ ಹಾನಿ ವರದಿ ಕೂಡಲೆ ಸಲ್ಲಿಸಿದಲ್ಲಿ ಪರಿಹಾರ ನೀಡಲಾಗುತ್ತದೆ. ವಿದ್ಯುತ್ ಕಮಬ ಬಿದ್ದು ಹೋದಲ್ಲಿ 24 ಗಂಟೆಯಲ್ಲಿ ಬದಲಾಯಿಸಬೇಕು. ಅನುದಾನದ ಕೊರತೆ ಇಲ್ಲ. ವರದಿ ನೀಡದೆ ಹೋದಲ್ಲಿ ಅಂತಹ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ‌ ನಿಶ್ಚಿತ ಎಂದು ಡಿ.ಸಿ. ಎಚ್ಚರಿಕೆ ನೀಡಿದರು.
ಆ.5 ರೊಳಗೆ ಟಾಸ್ಕ ಫೋರ್ಸ್ ಸಭೆ ಕರೆಯಿರಿ:ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಅವರು ಮಾತನಾಡಿ, ನೆರೆ ಹಾವಳಿ ಸಂಬಂಧ ಆ.5 ರೊಳಗೆ ಗ್ರಾಮ‌ ಪಂಚಾಯತಿ ಟಾಸ್ಕ್ ಫೋರ್ಸ್ ಕಮಿಟಿ ಸಭೆ ಕರೆಯಬೇಕು. 2020ರ ಪ್ರವಾಹ ಇತಿಹಾಸ ಅರಿತು ಮಳೆಯಿಂದ ಮನೆ ಮುಳುಗಡೆ ಸಾಧ್ಯತೆ ಇದ್ದಲ್ಲಿ, ಕೂಡಲೆ ಪಟ್ಟಿ ಮಾಡಿ ಅವರನ್ನು ಸ್ಥಳಾಂತರಕ್ಕೆ ಈಗಲೆ ಯೋಜನೆ ರೂಪಿಸಬೇಕು. ಕಾಳಜಿ ಕೇಂದ್ರ ಗುರುತಿಸಿ ಅಲ್ಲಿಗೆ ಭೇಟಿ ನೀಡಿ ಮೂಲಸೌಕರ್ಯಗಳನ್ನು ತಾಲೂಕ ಪಂಚಾಯತ್ ಇ.ಓ. ಪರಿಶೀಲಿಸಬೇಕು. ಆರೋಗ್ಯ ಇಲಾಖೆಯಿಂದ ಸಾಂಕ್ರಾಮಿಕ ರೋಗ ಹರಡದಂತೆ ಎಚ್ವರ ವಹಿಸಬೇಕು ಎಂದರು.
ಸಭೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಸಹಾಯಕ ಆಯುಕ್ತೆ ರೂಪಿಂದರ್ ಸಿಂಗ್ ಕೌರ್, ಪ್ರಭುರೆಡ್ಡಿ, ಡಿ.ಎಚ್.ಓ ಡಾ.ರತಿಕಾಂತ ಸ್ವಾಮಿ, ಜಂಡಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಪಶುಸಂಗೋಪನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಎಸ್.ಡಿ.ಅವಟಿ, ಡಿ.ಡಿ.ಪಿ.ಐ ಸೂರ್ಯಕಾಂತ ಮದಾನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿ.ಡಿ. ರಾಜಕುಮಾರ ರಾಠೋಡ, ಡಿ.ಯು.ಡಿ.ಸಿ. ಯೋಜನಾ ನಿರ್ದೇಶಕ ಮುನಾವರ್ ದೌಲಾ ಸೇರಿದಂತೆ ಇನ್ನಿತರ ಅಧಿಕಾರಿಗಳಿದ್ದರು. ತಾಲೂಕಾ ಕೇಂದ್ರದಿಂದ ತಹಶೀಲ್ದಾರರು ಸೇರಿ ತಾಲೂಕಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.