ಒಳಮೀಸಲಾತಿ ಎತ್ತಿ ಹಿಡಿದ ಸುಪ್ರೀಂಕೋರ್ಟ್ ಸಾಮಾಜಿಕ ನ್ಯಾಯದ ಗೆಲುವು : ಡಾ.ಅಂಬಾರಾಯ ಅಷ್ಠಗಿ
ಕಲಬುರಗಿ,ಆ.2-ಒಳ ಮೀಸಲಾತಿಯನ್ನು ಎತ್ತಿ ಹಿಡಿಯುವ ಮೂಲಕ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿ ಸಾಮಾಜಿಕ ನ್ಯಾಯಕ್ಕೆ ಹೊಸ ಶಕ್ತಿ ಹಾಗೂ ಭಾರತೀಯ ಸಂವಿಧಾನದ ಆಶಯಕ್ಕೆ ಹೆಚ್ಚಿನ ಬಲ ನೀಡಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷÀ ಡಾ.ಅಂಬಾರಾಯ ಅಷ್ಠಗಿ ಹೇಳಿದರು.
ಸುಪ್ರೀಂ ಕೋರ್ಟ್ನ ಸಪ್ತ ನ್ಯಾಯಾಧೀಶರ ಪೀಠವು ಚಿನ್ನಯ್ಯ ತೀರ್ಪನ್ನು ರದ್ದುಗೊಳಿಸಿದ್ದು, ದೇವೀಂದ್ರ ಸಿಂಗ ಪ್ರಕರಣದ ತೀರ್ಪನ್ನು ಎತ್ತಿಹಿಡಿದಿದೆ. ಅಂದರೆ ಭಾರತದ ಸಂವಿಧಾನವು ಪರಿಶಿಷ್ಟ ಜಾತಿ/ ಪಂಗಡಗಳಲ್ಲಿ ಆಂತರಿಕ ಮೀಸಲಾತಿಯನ್ನು ಅನುಮತಿಸುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪುನ್ನು ಸ್ವಾಗತಿಸಿದರು.
ಒಳ ಮೀಸಲಾತಿಯನ್ನು ರಾಜ್ಯಗಳೆ ಜಾರಿಗೆ ತರಲು ಸುಪ್ರೀಂಕೋರ್ಟ್ ಅನುಮತಿಸಿದೆ. ಒಳ ಮೀಸಲಾತಿಗೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯಂತೆ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಯವರು ಒಳಮೀಸಲಾತಿ ಜಾರಿಗೊಳಿಸಿ ಪರಿಶಿಷ್ಟ ಜಾತಿಯ 15% ದಲ್ಲಿ ಬಲಗೈ ಸಮುದಾಯಕ್ಕೆ 5%, ಎಡಗೈ ಸಮುದಾಯಕ್ಕೆ 6%, ಸ್ಪರ್ಶ ಪರಿಶಿಷ್ಟ ಜಾತಿಗೆ 3%, ಇತರೆ ಪರಿಶಿಷ್ಟ ಜಾತಿಗೆ 1% ಒಟ್ಟು 15% ಪ್ರತಿಶತ ಮೀಸಲಾತಿಯನ್ನು ಜಾರಿಗೊಳಿಸಿ ಐತಿಹಾಸಿಕ ಹೆಜ್ಜೆ ಇಟ್ಟಿದ್ದರು. ಈ ದಿಟ್ಟ ಕಾರ್ಯಕ್ಕೆ ಆರ್‌ಎಸ್‌ಎಸ್ ಹಾಗೂ ಸಂಘ – ಪರಿವಾರದ ಪ್ರಮುಖರ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸಂಸದ ಗೋವಿಂದ ಕಾರಜೋಳ, ಮಾಜಿ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ, ವಿಪಕ್ಷ ನಾಯಕರೂಗಳಾದ ಆರ್. ಅಶೋಕ್, ಛಲವಾದಿ ನಾರಾಯಣ ಸ್ವಾಮಿ ಸೇರಿದಂತೆ ಬಿಜೆಪಿಯ ವರಿಷ್ಠರು ಈ ಒಳ ಮೀಸಲಾತಿ ವರ್ಗಿಕರಣಕ್ಕೆ ಸಹಕರಿಸಿದ್ದನ್ನು ಡಾ ಅಷ್ಠಗಿ ಸ್ಮರಿಸಿದ್ದಾರೆ. ಭಾರತೀಯ ಜನತಾ ಪಕ್ಷ ಯಾವತ್ತೂ ಒಳ ಮೀಸಲಾತಿಗೆ ಬೆಂಬಲ ನೀಡಿದೆ. ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಸಮರ್ಥನೀಯ ಎಂದು ಒಳಮೀಸಲಾತಿ ಪರ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಿಂದಾಗಿ ಒಳಮೀಸಲಾತಿಗೆ ಒತ್ತಾಯಿಸಿ ಕಳೆದ 30 ವರ್ಷಗಳಿಂದ ನಡೆದ ನಿರಂತರ ಹೋರಾಟಕ್ಕೆ ದಿಗ್ವಿಜಯ ದೊರಕಿದೆ. ಈ ಕೂಡಲೇ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಒಳಮೀಸಲಾತಿ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಹಾಗೂ ಈಗಾಗಲೇ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಿರುವುದನ್ನು ರದ್ದುಗೊಳಿಸಿ, ಅತಿ ಶೀಘ್ರದಲ್ಲಿ ಒಳಮೀಸಲಾತಿ ವರ್ಗೀಕರಣಗೋಳಿಸಿ, ಬಳಿಕ ಅರ್ಜಿ ಆಹ್ವಾನಿಸಬೇಕು ಎಂದು ಆಗ್ರಹಿಸಿದರು.
ಈ ಹೋರಾಟದಲ್ಲಿ ಭಾಗಿಯಾಗಿರುವ ಕರ್ನಾಟಕ , ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಪ್ರತಿಯೊಬ್ಬ ಒಳ ಮೀಸಲಾತಿ ಪರ ಹೋರಾಟಗಾರರನ್ನು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರನ್ನು ಅವರು ಅಭಿನಂದಿಸಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ಗಣೇಶ ವಳಕೇರಿ, ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಎಸ್.ಜಿ.ಭಾರತಿ, ಚಿಂಚೋಳಿ ಮಂಡಲ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಮಹೇಂದ್ರ ಪೂಜಾರಿ, ಬಿಜೆಪಿ ಮುಖಂಡ ಗುಂಡಪ್ಪ ಶಿರಡೋಣ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.