ಹಿಂದಿ ಸಾಹಿತ್ಯದ ಶ್ರೇಷ್ಠ ಕಾದಂಬರಿಕಾರ ಮುನ್ಶಿ ಪ್ರೇಮಚಂದರ ಜನ್ಮ ದಿನಾಚರಣೆ
ವಿಜಯಪುರ,ಆ.2: ಸ್ಥಳೀಯ ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಿಂದಿ ಸಾಹಿತ್ಯದ ಶ್ರೇಷ್ಠ ಕಾದಂಬರಿ ಸಾಮ್ರಾಟ ಮುನ್ಶಿ ಪ್ರೇಮಚಂದ್ರರ ಜನ್ಮದಿನವನ್ನು ಆಚರಿಸಲಾಯಿತು.
ಬಬಲೇಶ್ವರ ಶಾಂತವೀರ ಪದವಿ ಪೂರ್ವ ಮಹಾ ವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಪ್ರೊ. ಎಸ್.ಡಿ. ಗಡದೆ ಮುಖ್ಯ ಅತಿಥಿಗಳಾಗಿ ಮಾತನಾಡಿ, ಪ್ರೇಮಚಂದ್ರರು ಸಮಾಜದ ಓರೆಕೋರೆಗಳನ್ನು ಶುದ್ಧಗೊಳಿಸುವ ಸಮಾಜದ ಮತ್ತು ವ್ಯಕ್ತಿ ದರ್ಪಣವಾಗಿ ಸಾಹಿತ್ಯ ರಚನೆಯಾಗಿದೆ. ಪ್ರೇಮಚಂದ್ರರರು 31 ಜುಲೈ 1880ರಲ್ಲಿ ಬನಾರಸ ಬಳಿಯ ಲಮಹೀ ಎಂಬ ಚಿಕ್ಕ ಗ್ರಾಮದ ಸಾಮಾನ್ಯ ಕುಟುಂಬದಲ್ಲಿ ಜನಸಿದ್ದಾರೆ. ಪ್ರೇಮಚಂದ್ರರು ಹಿಂದಿ ಸಾಹಿತಿಗಳು. ಆರಂಭದಲ್ಲಿ ಉರ್ದು ಭಾಷೆಯಲ್ಲಿ ಬರೆಯುತ್ತಿದ್ದ ಇವರು ನಂತರ ಹಿಂದಿ ಬರವಣಿಗೆ ಆರಂಭಿಸಿ ಸುಮಾರು 300 ಕಥೆಗಳು 12 ಕಾದಂಬರಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳಿಸಿದ್ದಾರೆ. ಅವರ ‘ಕಫನ್’ ಕಥೆಯಲ್ಲಿ ಬಡತನವನ್ನು ಮಾರ್ಮಿಕವಾಗಿ ಚಿತ್ರೀಕರಿಸಿದ್ದಾರೆ ಎಂದು ತಿಳಿಸಿದರು.
ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ನಡೆಯುವ ರಾಜ್ಯಮಟ್ಟದ ಅತ್ಯುತ್ತಮ ಉಪನ್ಯಾಸಕರಾಗಿ ಆಯ್ಕೆಯಾಗಿ ಪ್ರಶಸ್ತಿ ಹಾಗೂ ಅಭಿನಂದನಾ ಗೌರವಕ್ಕೆ ಪಾತ್ರರಾದ ವಾಣಿಜ್ಯ ವಿಭಾಗದ ಪ್ರೊ.. ಜಿ.ಎಸ್. ಬಗಲಿ ಅವರಿಗೆ ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಟಿ. ಮೇರವಾಡೆ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರೇಮಚಂದ್ರರು ಮಾರ್ಕ್ಸ್ವಾದಿ ದೃಷ್ಟಿಯವರಾಗಿದ್ದರು. ಗ್ರಾಮೀಣ ಜನರ ಬದುಕು ಬವಣೆಗಳನ್ನು ತಮ್ಮ ಕಥೆಗಳಲ್ಲಿ ಚಿತ್ರಿಸಿದ್ದಾರೆ. ಕೆಳವರ್ಗದ ಜನರ ನೋವು, ನಲಿವುಗಳನ್ನು ಅಭಿವ್ಯಕ್ತಗೊಳಿಸಿದ್ದಾರೆ. ಅವರ ಕಥೆಗಳನ್ನು ಓದುವಾಗ ಎಲ್ಲ ಪಾತ್ರಗಳು ವಾಸ್ತವಿಕತೆಯನ್ನು ತೋರುತ್ತವೆ. ಬಡತನ ವಿಧವೆ, ಬಾಲ್ಯವಿವಾಹ, ವರದಕ್ಷಿಣೆ ಇಂತಹ ಅನೇಕ ಸಮಸ್ಯೆಗಳನ್ನು ಅವರ ಬರವಣಿಗೆಯಲ್ಲಿ ಕಾಣಬಹುದು. ಸೇವಾ ಸದನ, ರಂಗಭೂಮಿ, ಕಾಯಕಲ್ಪ, ನಿರ್ಮಲ, ಗಬನ್, ಕರ್ಮಭೂಮಿ, ಗೋಧಾನ ಮುಂತಾದ ಹಿಂದಿ ಸಾಹಿತ್ಯದ ಅಮರ ಕಥೆಗಳಾಗಿವೆ. ಅನೇಕ ಆದರ್ಶಗಳನ್ನು ಓದುಗರಿಗೆ ನೀಡಿ 8ನೇ ಅಕ್ಟೋಬರ್ 1936ರಲ್ಲಿ ಇಹಲೋಕ ತ್ಯಜಿಸಿದರು ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಸ್ನೇಹಾ ರಾಠೋಡ ಪ್ರಾರ್ಥಿಸಿದರು. ಕುಮಾರಿ ರಾಧಾ ಕದಂಪುರ ಸ್ವಾಗತಿಸಿದರು. ಪ್ರೊ. ಎನ್.ಎಸ್. ಹರನಾಳ ಅತಿಥಿಗಳನ್ನು ಪರಿಚಯಿಸಿದರು. ಜವೇರಿಯಾ ಇನಾಮದಾರ ಮತ್ತು ರಾಜೇಶ್ವರಿ ಪಲ್ಲಾಪೂರ ಪ್ರೇಮಚಂದರ ವಿಚಾರಗಳನ್ನು ತಿಳಿಸಿದರು. ಕುಮಾರಿ ಸಾನಿಯಾ ತಾಂಬೋಲ್ಲಿ ನಿರೂಪಿಸಿದರು. ಭೀಮು ಕೊಡಗಾನೂರ ವಂದಿಸಿದರು.
ಮಹಾವಿದ್ಯಾಲಯದ ಉಪನ್ಯಾಸಕರಾದ ಪ್ರೊ. ಬಿ.ವ್ಹಿ. ಹಿರೇಮಠ, ಪ್ರೊ. ಬಿ.ಎ. ಕುಲಕರ್ಣಿ, ಪ್ರೊ. ಜಿ.ಎ. ಮೇಟಿ, ಪ್ರೊ. ಆರ್.ಎಸ್. ಚಲವಾದಿ, ಪ್ರೊ. ಎಸ್.ಎಮ್. ಚುಂಚೂರ, ಪ್ರೊ. ಶ್ರೀಶೈಲ ತರಳಗಟ್ಟಿ, ಪ್ರೊ. ವಿದ್ಯಾ ಅಂಗಡಿ, ಎಮ್.ಟಿ. ಶೇಲಾರ ಹಾಗೂ ಎಲ್ಲ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಜರಿದ್ದರು.