ಮಕ್ಕಳ ಆರೋಗ್ಯ ಸುಧಾರಣೆಗೆ ಯೋಜನೆಗಳ ಸದುಪಯೋಗಕ್ಕೆ ಕರೆ
ವಿಜಯಪುರ,ಆ.2:ತಾಯಿಯ ಹಾಲು ಅಮೃತಕ್ಕೆ ಸಮಾನ. ಎಲ್ಲಾ ತಾಯಿಂದಿರು ಮಗುವಿಗೆ ಹಾಲುಣಿಸುವುದನ್ನು ನಿರ್ಲಕ್ಷಿಸಬಾರದು. ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳ ಆರೋಗ್ಯ ಸುಧಾರಣೆಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಮಕ್ಕಳ ಆರೋಗ್ಯ ಸುಧಾರಣೆ ನಿಟ್ಟಿನಲ್ಲಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಶಸ್ತç ಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಕರೆ ನೀಡಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಯಿಯು ಸ್ತನ್ಯಪಾನ ಮಾಡುವುದರಿಂದ ಮಗುವಿನ ಆರೋಗ್ಯದಲ್ಲಿ ಆಗುವ ಧನಾತ್ಮಕ ಪರಿಣಾಮಗಳು, ಮಗುವಿನ ಬುದ್ದಿಶಕ್ತಿಯನ್ನು ಹೆಚ್ಚಿಸುತ್ತದೆ. ತಾಯಿಯ ಹೆರಿಗೆಯ ಅಂತರವನ್ನು ಹೊಂದುವುದರಿAದ ಸ್ತನ, ಅಂಡಾಶಯದ ಕ್ಯಾನ್ಸರ ಮತ್ತು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಮಗುವಿಗೆ ಹಾಲುಣಿಸುವಿಕೆಯಿಂದ ಸಾಂಕ್ರಾಮಿಕ ಕಾಯಿಲೆಗಳು, ಅತಿಸಾರ, ಉಸಿರಾಟದ ಸೋಂಕುಗಳನ್ನು ದೂರವಿಡಬಹುದು ಎಂದು ಹೇಳಿದರು.
ಆರ್.ಎಂ.ಓ. ಡಾ.ಸುರೇಶ ಚವ್ಹಾಣ ಅವರು ಮಾತನಾಡಿ, ತಾಯಿ ಹಾಗೂ ತಾಯಿ ಸ್ತನ್ಯಪಾನ ಮಹತ್ವದ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ. ಹುಟ್ಟಿದ ಮಗುವಿಗೆ ಆರು ತಿಂಗಳ ತನಕ ತಾಯಿಯ ಹಾಲೊಂದನ್ನೇ ಕೊಡಬೇಕು. ತಾಯಿ ಸ್ತನ್ಯಪಾನ ಕೊಡುವುದರಿಂದ ಶೇ.25ರಷ್ಟು ಶಿಶು ಮರಣವನ್ನು ಕಡಿಮೆ ಮಾಡಬಹುದು. ಸಾರ್ವಜನಿಕರಿಗೆ ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ತನ್ಯಪಾನದ ಮಹತ್ವವನ್ನು ಕಾರ್ಯರೂಪಕ್ಕೆ ತರಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಸ್ಪತ್ರೆಯ ಚಿಕ್ಕಮಕ್ಕಳ ತಜ್ಞ ಡಾ. ಸುಧೀರ ಚವ್ಹಾಣ ಮಗುವಿನ ಸೂಕ್ತ ಆಹಾರ ಪದ್ಧತಿಗಳು ಸ್ತನ್ಯಪಾನದಿಂದ ತಾಯಿ ಮತ್ತು ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ. ಡಬ್ಲೂಎಚ್‌ಓ ಮತ್ತು ಯುನಿಸೆಫ್ ಸೂಚನೆಯ ಪ್ರಕಾರ ಮಗು ಹುಟ್ಟಿದ ಒಂದು ಗಂಟೆಯೊಳಗೆ ಸ್ತನ್ಯಪಾನ ಆರಂಭ ಮಾಡುವುದು ಅತೀ ಅವಶ್ಯಕ ಎಂದು ಹೇಳಿದರು.
ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ. ಕೆ.ಡಿ.ಗುಂಡಬಾವಡಿ ಮಾತನಾಡಿ, ಮಗುವಿಗೆ ತಾಯಿ ಹಾಲು ಅಮೃತವಿದ್ದಂತೆ. ಉತ್ತಮ ಪೌಷ್ಟಿಕ ಆಹಾರವನ್ನು ತಾಯಂದಿರು ಸೇವಿಸಬೇಕು. ಯಾವುದಕ್ಕೂ ಮಗುವಿನ ಹಾಲುಣಿಸುವುದನ್ನು ತಪ್ಪಿಸಬಾರದು. ಮಗುವಿಗೆ ಪದೇ ಪದೇ ಹಾಲುಣಿಸುವುದರಿಂದ ತಾಯಿಯ ಹಾಲು ಹೆಚ್ಚಾಗುತ್ತದೆ. ಎಲ್ಲ ತಾಯಂದಿರು ತಮ್ಮ ಮಗುವಿಗೆ ಹುಟ್ಟಿನಿಂದ 2 ವರ್ಷದವರೆಗೆ ಹಾಲುಣಿಸಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಚಿಕ್ಕಮಕ್ಕಳ ತಜ್ಞರಾದ ಡಾ. ವಿನಯ, ಡಾ. ಸುನೀಲ ರೂಡಗಿ ಡಾ. ಶೈಲಾಶ್ರೀ, ರಮೇಶ ರಾಠೋಡ, ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ಮೋತಿಲಾಲ ಚವ್ಹಾಣ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೇಖಾ ದಶವಂತ, ಐ.ಇ.ಸಿ ವಿಭಾಗ (ಡಿಇಓ) ಕುಮಾರ ರಾಠೋಡ ಸೇರಿದಂತೆ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಶ್ರೀದೇವಿ ಮೋರೆ ಸ್ವಾಗತಿಸಿದರು. ಚಿಕ್ಕ ಮಕ್ಕಳ ತಜ್ಞೆ ಡಾ. ಅಪೂರ್ವ ವಂದಿಸಿದರು.