ಮಾನವ ಕಳ್ಳ ಸಾಗಣೆ ವಿರುದ್ಧ ವ್ಯಾಪಕ ಜಾಗೃತಿ ನಡೆಯಲಿ
ಸಂಜೆವಾಣಿ ವಾರ್ತೆ
ಹೊಸಪೇಟೆ ಆ2: ಮಹಿಳೆಯರು ಸಾಮಾಜಿಕ ಸಮಾನತೆ ಸಾಧಿಸಿ ಸ್ವಾವಲಂಬನೆ ಜೀವನ ನಡೆಸಲು ಪ್ರತಿಯೊಬ್ಬರು ಅವರಿಗೆ ಪ್ರೋತ್ಸಹಿಸಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಬ್ದುಲ್ ರಹೀಮಾನ ಎ. ನಂದಗಡಿ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವ ಮಾನವ ಕಳ್ಳ ಸಾಗಾಣೆ ವಿರೋಧಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಮಾನವ ಕಳ್ಳ ಸಾಗಾಣೆಯು ಸಹ ಒಂದಾಗಿದೆ. ಇಂತಹ ಕೃತ್ಯಕ್ಕೆ ಹೆಚ್ಚಾಗಿ ಮಹಿಳೆಯರೇ ಬಲಿ ಪಶುವಾಗುತ್ತಾರೆ. ಹೆಚ್ಚಾಗಿ ಬಾಲಕಿಯರೇ ನಾಪತ್ತೆಯಾಗುವುದು ದೊಡ್ಡ ವಿಪರ್ಯಾಸವಾಗಿದೆ. ಈ ಕಳ್ಳ ಸಾಗಣೆಗೆ ಪುಟ್ಟ ಮಕ್ಕಳು ಕೂಡ ಬಲಿಯಾಗುತ್ತಿದ್ದಾರೆ. ಭಾರತದಲ್ಲಿ ಮಾನವ ಕಳ್ಳ ಸಾಗಣೆ ವಿರುದ್ಧ ಜಾಗೃತಿ ಮೂಡಿಸಲು ಇತಂಹ ಕಾರ್ಯಕ್ರಮಗಳು ನಡೆಯಬೇಕಿದೆ ಎಂದು ಅವರು ಹೇಳಿದರು.
ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಅನ್ಸರ್ ಬಾಶು ಎಸ್.ಕೆ. ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಹಾಗೂ ಮಾನವ ಕಳ್ಳ ಸಾಗಣೆಯನ್ನು ಸಂಪೂರ್ಣವಾಗಿ ತಡೆಯಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಹೇಮಲತಾ ಬಿ. ಹುಲ್ಲೂರ, ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ್ ಬಾಬು ಬಿ.ಎನ್., ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪ್ರಶಾಂತ್ ನಾಗಲಾಪುರ್, ಅಪರ ಸಿವಿಲ್ ನ್ಯಾಯಾಧೀಶ ಅಶೋಕ ಆರ್.ಹೆಚ್., 2ನೇ ಅಪರ ಸಿವಿಲ್ ನ್ಯಾಯಾಧೀಶರಾದ ಸಂಜೀವ್ ಕುಮಾರ ಜಿ., ವಕೀಲರ ಸಂಘದ ಅಧ್ಯಕ್ಷ ಕೆ. ಪ್ರಹ್ಲಾದ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ. ಶ್ರೀನಿವಾಸಮೂರ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶ್ವೇತಾ ಎಸ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನಾಗರಾಜ್ ಹವಾಲ್ದಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಅಂಗಡಿ, ಪಟ್ಟಣ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಲಕನ್ ಆರ್ ಮಸುಗುಪ್ಪಿ, ಗ್ರಾಮೀಣ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷರಾದ ವಿಜಯಲಕ್ಷ್ಮಿ, ಕೊಟ್ಟೂರು ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷರಾದ ಗೀತಾಂಜಲಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.