ಪ್ರೇಮ ತುಂಬಿದ ಹೃದಯದಲ್ಲಿ ಪರಮಾತ್ಮನ ವಾಸ: ಹಾರಕೂಡ ಶ್ರೀ
ಬೀದರ್:ಆ.2: ಪ್ರೇಮ ತುಂಬಿದ ಹೃದಯದಲ್ಲಿ ಪರಮಾತ್ಮ ಗಟ್ಟಿಯಾಗಿ ನೆಲೆಸಿರುತ್ತಾನೆ.
ಅಂತರ್ಮುಖಿಯಾಗಿ ಇಣುಕಿ ನೋಡಿದರೂ ಸಾಕು ದೇವ ಸಾಮ್ರಾಜ್ಯದ ಬಾಗಿಲು ತೆರೆದುಕೊಳ್ಳುತ್ತದೆ ಎಂದು ಹಾರಕೂಡದ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ಕಮಲಾಪುರ ತಾಲೂಕಿನ ಲೇಂಗಟಿ ಗ್ರಾಮಸ್ಥರು ಆಯೋಜಿಸಿದ ಗುರು ವಂದನೆ ಹಾಗೂ 687ನೇ ತುಲಾಭಾರ ಸೇವೆ ಸಮಾರಂಭದ ಪಾವನ ಸನ್ನಿಧಾನವಹಿಸಿ ಮಾತನಾಡಿದ ಶ್ರೀಗಳು ರಾಮಕೃಷ್ಣ ಪರಮಹಂಸರ ವಚನ ವೇದದಲ್ಲಿ ಉಲ್ಲೇಖಿಸುತ್ತ ದೇವರು ಚರ್ಮ ರೋಮಗಳಲಿಲ್ಲ, ಶ್ರದ್ಧೆ ಇದ್ದಲ್ಲಿ ದೇವರ ಸಾಕ್ಷಾತ್ಕಾರ ಸಾಧ್ಯವೆನ್ನುವುದು ಶತಸಿದ್ಧ.
ನಾವಿದ್ದಲ್ಲಿಯೇ ದೃಢ ಶ್ರದ್ಧೆಯಿಂದ ಧ್ಯಾನಿಸಿದರೆ ಶಿವನ ಕೃಪೆ ನಿಶ್ಚಿತವಾಗಿ ದೊರಕುತ್ತದೆ.
ನಂಬಿದ ಭಕ್ತರಿಗೆ ಮಹಾತ್ಮರ ಪ್ರವಚನ ರಕ್ಷಾ ಕವಚವಾಗಿ ಸದಾಕಾಲ ಕಾಪಾಡುತ್ತದೆ.
ಮಹಾದೇವನ ಆವಾಸಸ್ಥಾನವಾಗಿರುವ ಲೇಂಗಟಿ ಇದು ನಿಜವಾಗಿಯೂ ಲಿಂಗದ ಹಟ್ಟಿಯಾಗಿದ್ದು, ಎಲ್ಲರೂ ಒಂದಾಗಿ ಮಾಡಿರುವ ಈ ಧರ್ಮ ಕಾರ್ಯ ಶಿವಾರ್ಪಿತವಾಗುತ್ತದೆ.
ಭಕ್ತಿ ಸಮೃದ್ಧಿಯಿಂದ ಕೂಡಿದ ಲೇಂಗಟಿ ಗ್ರಾಮದಲ್ಲಿ ಹಾರಕೂಡ ಚೆನ್ನಬಸವ ಶಿವಯೋಗಿಗಳ ಕೃಪೆಯಿಂದ ಸಕಲೈಶ್ವರ್ಯದ ತೊಟ್ಟಿಲು ತೂಗುತ್ತಿರಲಿ ಎಂದು ಶುಭ ಹಾರೈಸಿದರು.
ಲೇಂಗಟಿ ಗ್ರಾಮದ ಶ್ರೀ ಪ್ರಭುಲಿಂಗ ಸ್ವಾಮಿಗಳು ಸಮ್ಮುಖ ವಹಿಸಿದ್ದರು.
ಕಾಶಿನಾಥ ಹಳಕೆ ಸ್ವಾಗತಿಸಿದರು.
ಹಣಮಂತ ಭೂತೆ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.
ಕಲ್ಯಾಣಕುಮಾರ ಬಂಟ್ನಳ್ಳಿ ಮತ್ತು ವಚನಶ್ರೀ ಬೀದರ ಸಂಗೀತ ಸೇವೆ ಸಲ್ಲಿಸಿದರು.
ಕಂಟೆಪ್ಪ ಪಾಟೀಲ, ಚಾಮರಾವ ಕೊಳ್ಳುರೆ, ಶಿವಕುಮಾರ ಟೇಂಗಳಿ, ಶಿವರಾಜ ಹತ್ತರಕೆ, ಕಮಲಾಕರ ಬಿಲಗುಂದೆ, ಮಸ್ತಾನಸಾಬ್ ಪಠಾಣ, ಪಾಂಡುರAಗ ಜಮಾದಾರ, ಬಾಬು ಮಾನಿಖೇಡ್ ಮುಂತಾದವರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಗ್ರಾಮಕ್ಕೆ ಆಗಮಿಸಿದ ಹಾರಕೂಡ ಶ್ರೀಗಳನ್ನು ಅಲಂಕೃತ ಸಾರೋಟಿನಲ್ಲಿ ಅದ್ದೂರಿ ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು.