ಒಳ ಮೀಸಲಾತಿಗೆ ಸುಪ್ರೀಂ ಕೋರ್ಟ್ ಅಸ್ತು: ವಿಜಯೋತ್ಸವ
ಸಂಜೆವಾಣಿ ವಾರ್ತೆ
ಹೊಸಪೇಟೆ ಆ2: ಒಳ ಮೀಸಲಾತಿ ಪರವಾಗಿ ಸುಪ್ರೀಂ ಕೋರ್ಟ್‍ನ ಏಳು ನ್ಯಾಯಾಧೀಶರನ್ನೊಳಗೊಂಡ ಪೀಠ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ನಗರದ ಅಂಬೇಡ್ಕರ್ ವೃತ್ತದಲ್ಲಿ ವಿಜಯನಗರ ಜಿಲ್ಲಾ ಮಾದಿಗ ಸಮಾಜದ ವತಿಯಿಂದ ಗುರುವಾರ ವಿಜಯೋತ್ಸವ ಆಚರಿಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಇದಕ್ಕೂ ಮುನ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಸಂವಿಧಾನ ಪೀಠಿಕೆಯನ್ನು ಓದಲಾಯಿತು.
ಅಂಬೇಡ್ಕರ್ ಸಂಘದ ಜಿಲ್ಲಾಧ್ಯಕ್ಷ ಕೆ.ಪಿ. ಉಮಾಪತಿ ಮಾತನಾಡಿ, ರಾಜ್ಯದಲ್ಲಿ ಒಳ ಮೀಸಲಾತಿಯಿಂದ ಮಾದಿಗ ಸಮಾಜಕ್ಕೆ ಜನಸಂಖ್ಯೆಯನುಸಾರ ಮೀಸಲು ದೊರೆಯಲಿದೆ. ಸಂವಿಧಾನ ನೀಡಿರುವ ಮೀಸಲಾತಿಯಿಂದ ಮಾದಿಗ ಸಮಾಜಕ್ಕೆ ಭಾರೀ ಅನ್ಯಾಯವಾಗುತ್ತಿತ್ತು. ದಶಕಗಳಿಂದ ಒಳ ಮೀಸಲಾತಿಗಾಗಿ ಹೋರಾಟ ನಡೆದಿದೆ. ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ದೇಶಾದ್ಯಂತ ಒಳ ಮೀಸಲಾತಿ ಕುರಿತು ಹೋರಾಟ ನಡೆದಿದೆ. ಈಗ ಸುಪ್ರೀಂ ಕೋರ್ಟ್ ನ ಪೀಠದ ಏಳು ನ್ಯಾಯಾಧೀಶರಲ್ಲಿ ಆರು ಜನ ಒಳ ಮೀಸಲಾತಿ ಪರ ತೀರ್ಪು ನೀಡಿದ್ದಾರೆ. ಒಳ ಮೀಸಲಾತಿಯಿಂದ ಸಮಾನತೆಗೆ ಧಕ್ಕೆ ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗಾಗಿ ಮಾದಿಗರ ದಶಕಗಳ ಹೋರಾಟಕ್ಕೆ ಗೆಲುವು ಲಭಿಸಿದೆ ಎಂದರು.
ಸಂಘದ ಗೌರವಾಧ್ಯಕ್ಷ ಎಂ.ಸಿ. ವೀರಸ್ವಾಮಿ, ಮುಖಂಡರಾದ ಡಾ. ಎ.ವೆಂಕಟೇಶ್, ವೆಂಕಪ್ಪ, ಎಚ್. ಶೇಷು, ಭರತ್‍ಕುಮಾರ ಸಿ.ಆರ್., ಪರಶುರಾಮ, ಶ್ರೀನಿವಾಸ್, ವಿಜಯಕುಮಾರ, ಮರಿದಾಸ, ಕರಿಯಪ್ಪ, ಹನುಮಂತಪ್ಪ, ಸೋಮಶೇಖರ್, ಟೈಗರ್ ಪಂಪಣ್ಣ, ತಾಯಪ್ಪ, ಈರಣ್ಣ ಮತ್ತಿತರರಿದ್ದರು.