ಕನ್ನಡ ವಿವಿಗೆ ಅಧ್ಯಾಪಕರ ಕೊಡುಗೆ ಶ್ಲಾಘನೀಯ
ಸಂಜೆವಾಣಿ ವಾರ್ತೆ
ಹೊಸಪೇಟೆ 2: ನಾಡಿನ ಬಹುತ್ವದ ನೆಲೆಯಲ್ಲಿ ರೂಪುಗೊಂಡಿರುವ ಕನ್ನಡ ವಿಶ್ವವಿದ್ಯಾಲಯವು ಕನ್ನಡ ಸಾಹಿತ್ಯ ಭಂಡಾರ, ವಚನ ಸಾಹಿತ್ಯ, ಕನ್ನಡ ಭಾಷಾ ಅಭಿವೃದ್ಧಿ ಹಾಗೂ ಅಲೆಮಾರಿ ಬುಡಕಟ್ಟು ಸಮುದಾಯಗಳನ್ನು ಮುಖ್ಯವಾಹಿನಿಗೆ ಪರಿಚಯಿಸುವಲ್ಲಿ ವಿವಿಯ ಅಧ್ಯಾಪಕರ ಕೊಡುಗೆ ಶ್ಲಾಘನೀಯವಾಗಿದೆ ಎಂದು ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಭುವನವಿಜಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಿವೃತ್ತಿ ಹೊಂದಿದ ಪ್ರಾಧ್ಯಾಪಕರಾದ ಡಾ. ಕೆ.ಎಂ. ಮೇತ್ರಿ, ಡಾ. ಡಿ. ಪಾಂಡುರಂಗಬಾಬು ಹಾಗೂ ಡಾ. ಕೆ. ರವೀಂದ್ರನಾಥ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೃತ್ತಿ ಮತ್ತು ಪ್ರವೃತ್ತಿ ಎರಡನ್ನು ಸಂಶೋಧನೆಯನ್ನಾಗಿಸಿಕೊಂಡು, ನಾಡಿಗೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಇನ್ನು ಕನ್ನಡ ವಿಶ್ವವಿದ್ಯಾಲಯವು ಸರ್ವರಿಗೂ ಮುಕ್ತವಾಗಿದ್ದು, ನಿವೃತ್ತ ಪ್ರಾಧ್ಯಾಪಕರು ಹಾಗೂ ನೌಕರರ ಸೇವೆಗಾಗಿ ಕನ್ನಡ ವಿಶ್ವವಿದ್ಯಾಲಯವು ಸದಾ ತೆರೆದಿರುತ್ತದೆ ಎಂದು ಹೇಳಿದರು.
ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ, ಡೀನರಾದ ಡಾ. ಎಫ್.ಟಿ. ಹಳ್ಳಿಕೇರಿ, ಡಾ.ಚಲುವರಾಜು, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಪಕುಲಸಚಿವ ಡಾ. ಎ. ವೆಂಕಟೇಶ ಸ್ವಾಗತಿಸಿದರು, ಸಹಾಯಕ ಕುಲಸಚಿವ ಗುರುಬಸಪ್ಪ ವಂದಿಸಿದರು, ಅಧ್ಯಾಪಕಿ ಜ್ಯೋತಿ ನಿರೂಪಿಸಿದರು.