ಉಕ್ಕಿ ಹರಿಯುತ್ತಿರುವ ತುಂಗಭದ್ರಾ ನದಿಮಕರಬ್ಬಿ-ಬ್ಯಾಲಹುಣ್ಸಿ ರಸ್ತೆ ಸಂಪರ್ಕ ಕಡಿತ : ಬೆಳೆಗಳು ಜಲಾವೃತ
ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಅಷ2- : ಮಲೆನಾಡು ಭಾಗದಲ್ಲಿ ಹೆಚ್ಚು ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ನದಿಯ ಒಳ ಹರಿವು ತೀವ್ರ ಹೆಚ್ಚಳವಾಗಿದ್ದು, ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಮಕರಬ್ಬಿ-ಬ್ಯಾಲಹುಣ್ಸಿ ರಸ್ತೆ, ಕಿರು ಸೇತುವೆಗಳು ಮುಳುಗಡೆಯಾಗಿದ್ದು, ಈ ಮಾರ್ಗ ಸಂಪರ್ಕ ಕಡಿತಗೊಂಡಿದೆ. ಈ ರಸ್ತೆ ಮೂಲಕ ಸಂಚರಿಸುವ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ತೊಂದರೆ ಅನುಭವಿಸಿದರು.
ಕುರುವತ್ತಿ ಗ್ರಾಮದ ನದಿ ದಂಡೆಯಲ್ಲಿರುವ ಜನವಸತಿಗೆ ನೀರು ನುಗ್ಗಿದ್ದು, ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ನಾಲ್ಕಲು ಕುಟುಂಬಗಳನ್ನು ಸ್ಥಳಾಂತರ ಮಾಡಿದ್ದಾರೆ. ಗ್ರಾಮದ ಸಮುದಾಯ ಭವನದಲ್ಲಿ ಸಂತ್ರಸ್ತರಿಗೆ ಕಾಳಜಿ ಕೇಂದ್ರ ತೆರೆಯಲಾಗಿದೆ. ನಾಲ್ಕು ಕುಟುಂಬಗಳ 15ಕ್ಕೂ ಹೆಚ್ಚು ಜನರು ಅಲ್ಲಿ ಆಶ್ರಯ ಪಡೆದಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ.
ನದಿ ತೀರದ ಗ್ರಾಮಗಳಾದ ಹರವಿ, ಲಿಂಗನಾಯಕನಹಳ್ಳಿ, ಕುರುವತ್ತಿ, ಅಂಗೂರು, ಕೋಟಿಹಾಳ, ನಂದಿಗಾವಿ, ಹೊಸಹಳ್ಳಿ, ಹಿರೇಬನ್ನಿಮಟ್ಟಿ, ಮಕರಬ್ಬಿ, ಬ್ಯಾಲಹುಣ್ಸಿ, ನವಲಿ, ಕೊಂಬಳಿ ಗ್ರಾಮಗಳ ಕೃಷಿ ಜಮೀನುಗಳಿಗೆ ಪ್ರವಾಹ ನುಗ್ಗಿದೆ. ಸಾವಿರಾರು ಎಕರೆ ಪ್ರದೇಶದಲ್ಲಿನ ಭತ್ತ, ಮೆಕ್ಕೆಜೋಳ, ಕಬ್ಬು, ಅಡಿಕೆ ಬೆಳೆಗಳು ಮುಳುಗಡೆಯಾಗಿವೆ.
ತಾಲೂಕಿನ ರಾಜವಾಳ ಸಮೀಪದ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್‍ನಲ್ಲಿ ಗುರುವಾರ ಬೆಳಿಗ್ಗೆ 1,99,211 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಬ್ಯಾರೇಜ್‍ನ 18 ಗೇಟ್‍ಗಳನ್ನು ತೆರೆದು ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ತಾಲೂಕಿನ ಪ್ರಸಿದ್ಧ ಸುಕ್ಷೇತ್ರ ಮದಲಗಟ್ಟಿ ಆಂಜನೇಯ ದೇವಸ್ಥಾನವನ್ನು ನದಿಯ ಪ್ರವಾಹ ಸುತ್ತುವರಿದಿದೆ.
ತಹಶೀಲ್ದಾರ್ ಅಮರೇಶ ಅವರು ನದಿ ತೀರದ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ಸ್ಥಿತಿಯನ್ನು ಖುದ್ದು ವೀಕ್ಷಿಸಿದರು. ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ನದಿಗೆ ಇಳಿಯಬಾರದು. ಜಾನುವಾರುಗಳನ್ನು ನದಿ ತೀರಕ್ಕೆ ಕೊಂಡೊಯ್ಯಬಾರದು. ನದಿ ತೀರದ ಜನರು ಸದಾ ಜಾಗೃತೆ ವಹಿಸಬೇಕು ಎಂದು ಅವರು ಮನವಿ ಮಾಡಿದರು.
‘ಕುರುವತ್ತಿಯ ನಾಲ್ಕು ಕುಟುಂಬಗಳನ್ನು ಸ್ಥಳಾಂತರಿಸಿ ಅವರಿಗಾಗಿ ಕಾಳಜಿ ಕೇಂದ್ರ ತೆರೆದಿದ್ದೇವೆ. ಮುಂದಿನ ದಿನಗಳಲ್ಲಿ ಪ್ರವಾಹ ಹೆಚ್ಚಾದಲ್ಲಿ ನದಿ ತೀರದ 10 ಗ್ರಾಮಗಳಲ್ಲಿ ಕಾಳಜಿ ಕೇಂದ್ರ ತೆರೆಯಲು ಸ್ಥಳಗಳನ್ನು ಗುರುತಿಸಿ, ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಕೃಷಿ ಜಮೀನುಗಳಿಗೆ ಪ್ರವಾಹ ನುಗ್ಗಿರುವುದರಿಂದ ಬೆಳೆಗಳು ಜಲಾವೃತಗೊಂಡಿವೆ. ಪ್ರವಾಹ ಇಳಿಕೆ ನಂತರ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಿ ಬೆಳೆ ಹಾನಿಯ ಮಾಹಿತಿ ಸಂಗ್ರಹಿಸಲಾಗುವುದು’ ಎಂದು ತಹಶೀಲ್ದಾರ್ ಅಮರೇಶ ತಿಳಿಸಿದರು.