ದುಶ್ಚಟಗಳನ್ನು ಬಿಡುವುದರಿಂದ ಆರೋಗ್ಯ ಸುಧಾರಣೆ
ಧಾರವಾಡ,ಆ೨: ಇಲಕಲ್ಲ ಚಿತ್ತರಗಿ ಮಹಾಂತಮಠದ ಡಾ.ಮಹಾಂತ ಶಿವಯೋಗಿ ಅಪ್ಪಗಳು, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ನಿರಂತರವಾಗಿ ಶ್ರಮಿಸಿದ್ದಾರೆ. ಡಾ. ಮಹಾಂತ ಶಿವಯೋಗಿಗಳು ತೋರಿದ ದಾರಿಯಲ್ಲಿ ಪ್ರತಿಯೊಬ್ಬರೂ ಸಾಗಿದರೆ ಆರೋಗ್ಯಕ ಸಮಾಜ ಹೊಂದಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕರ್ನಾಟಕ ಮಧ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಹಾಗೂ ಸುಧಾರಣೆ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಹಾಗೂ ವಿಚಾರ ಸಂಕಿರಣವನ್ನು ಉದ್ಘಾಟಿಸಿ, ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು.
ದುಶ್ಚಟಗಳನ್ನು ಬಿಡುವುದರಿಂದ ದೈಹಿಕ ಆರೋಗ್ಯ ಸುಧಾರಣೆಯಾಗುತ್ತದೆ. ಜೊತೆಗೆ ಆರ್ಥಿಕವಾಗಿ ಸದೃಡರಾಗಲೂ ಸಾಧ್ಯವಿದೆ. ದುಶ್ಚಟಗಳಿಗೆ ದಾಸರಾಗಿ ನಿತ್ಯ ಕಣ್ಣೀರಿಡುವ ಕುಟುಂಬಗಳಿಗೆ ನೆಮ್ಮದಿ ಕಲ್ಪಿಸಿದ ಶ್ರೇಯಸ್ಸು ಮಹಾಂತ ಶಿವಯೋಗಿಗಳಿಗೆ ಸಲ್ಲುತ್ತದೆ ಎಂದರು.
ಮಹಾಂತ ಅಪ್ಪಗಳು, ವ್ಯಸನ ಮುಕ್ತ ಸಮಾಜ ರೂಪಿಸಲು ಜೋಳಿಗೆ ಹಾಕಿದ್ದು ಮಾತ್ರವಲ್ಲ, ಹೊರದೇಶದಲ್ಲೂ ವ್ಯಸನ ಮುಕ್ತ ಸಮಾಜಕ್ಕಾಗಿ ಕಾರ್ಯಕ್ರಮ ಮಾಡಿ, ಸಮಾಜ ಸುಧಾರಣೆಗೆ ಶ್ರಮಿಸಿದರು ಎಂದರು.
ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ ಅವರು ಭಾಗವಹಿಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ ಅವರು ಮಾತನಾಡಿ, ಸಣ್ಣ ವಯಸ್ಸಿನ ಮಕ್ಕಳು ಗಾಂಜಾ, ಡ್ರಗ್ಸ್ ದಂತಹ ದುಶ್ಚಟಗಳಿಗೆ ಬಲಿ ಆಗುತ್ತಿದ್ದಾರೆ. ಇವರಿಗೆ ಪಾಲಕರು ಇತರರು ಸರಿಯಾಗಿ ಗಮನಿಸದೇ ಇರುವುದು ಕಾರಣವಾಗಿದೆ. ಪಾಲಕರು ಮಕ್ಕಳ ಪಾಲನೆ ಬಗ್ಗೆ ಜವಾಬ್ದರಿಯಿಂದ ವರ್ತಿಸಬೇಕೆಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಮಾತನಾಡಿ, ಇಲಕಲ್ಲ ಮಹಾಂತ ಅಪ್ಪಗಳನ್ನು ಬಾಲ್ಯದಿಂದಲೇ ನೋಡಿದ್ದೇನೆ. ಅವರ ಕ್ರಾಂತಿಕಾರಿ ನಡೆ ಅಂದಿನ ಹಳ್ಳಿಗಳಲ್ಲಿ ಸಂಚಲನ ಮೂಡಿಸಿತ್ತು. ಹರಿಜನ, ಗಿರಿಜನ ಕೇರಿ, ಕೊಳಚೆ ಪ್ರದೇಶ, ಪಟ್ಟಣ, ಹಳ್ಳಿಗಳ ಬೇಧವಿಲ್ಲದೆ ಎಲ್ಲ ಕಡೆಗೂ ಮಹಾಂತ ಜೊಳಿಗೆಯೊಂದಿಗೆ ಸಂಚರಿಸಿ, ಜನರಲ್ಲಿ ವ್ಯಸನಗಳ ಬಗ್ಗೆ ಅರಿವು ಮೂಡಿಸುತ್ತಿದ್ದರು ಎಂದು ಅವರು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಅವರು ಮಾತನಾಡಿ, ಅನೇಕ ಕಡೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ದುಶ್ಚಟಗಳಿಗೆ ಒಳಗಾಗಿದ್ದಾರೆ ಎಂಬ ಆರೋಪಗಳಿವೆ. ಆದ್ದರಿಂದ ಇಡೀ ಶೈಕ್ಷಣಿಕ ವಲಯವನ್ನು ವ್ಯಸನಮುಕ್ತಗೊಳಿಸಿ, ಶುದ್ಧಿಕರಿಸುವ ಅಗತ್ಯವಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಶಿಕ್ಷಕರಿಗೆ, ಮಕ್ಕಳಿಗೆ ಅರಿವು ಮೂಡಿಸುವ, ಜಾಗೃತಿ ಹೆಚ್ಚಿಸುವ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಡಿಮ್ಹಾನ್ಸ್ ಸಂಸ್ಥೆಯ ಟೆಲಿಮಾನಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ, ಮನೋವೈದ್ಯ ಡಾ. ಸುಧೀಂದ್ರ ಹುದ್ದಾರ ಅವರು ಮಾನಸಿಕ ಆರೋಗ್ಯ ಮತ್ತು ವ್ಯಸನ ಮುಕ್ತತೆಯ ಉಪಾಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಮನಗುಂಡಿ ಗುರುಮಹಾಮನೆಯ ಬಸವಾನಂದ ಸ್ವಾಮಿಗಳು ಮಾತನಾಡಿ, ಪ್ರತಿಯೊಬ್ಬರು ತಮ್ಮ ಶಕ್ತಿಯನ್ನು ಉಪಯೋಗಿಸದಿದ್ದರೆ ಅದು ಖಾಯಿಲೆ ಆಗಿ ಪರಿವರ್ತನೆ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಅನೇಕ ಸಾಧಕರನ್ನು ನೋಡಿದಾಗ ಸಕ್ಕರೆ, ಹೃದಯ ರೋಗ, ಕ್ಯಾನ್ಸರ್ ದಂತ ರೋಗಗಳನ್ನು ಕಾಣುತ್ತಿದ್ದೇವೆ. ಉತ್ತಮ ಆಹಾರ ಪದ್ದತಿ, ಉತ್ತಮ ಹವ್ಯಾಸಗಳು ಇದಕ್ಕೆ ಪರಿಹಾರ ಎಂದು ಅವರು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭಾ ಪಿ., ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ ವೇದಿಕೆಯಲ್ಲಿದ್ದರು.