ರಾಷ್ಟ್ರೀಯ ಸೇವಾ ಯೋಜನೆ ವ್ಯಕ್ತಿತ್ವ ವಿಕಾಸನಕ್ಕೆ ಬುನಾದಿ
ಬಾಗಲಕೋಟೆ,ಆ೨: ರಾಷ್ಟ್ರೀಯ ಸೇವಾ ಯೋಜನೆ ವ್ಯಕ್ತಿತ್ವ ವಿಕಾಸನಕ್ಕೆ ಬುನಾದಿಯಾಗಿದ್ದು, ನಾಯಕತ್ವ ಗುಣ ಬೆಳೆಸುವ ಶಿಬಿರವಾಗಿದೆ ಎಂದು ವಿಶ್ರಾಂತ ಪ್ರಾಚಾರ್ಯ ಡಾ.ಬಿ.ಆರ್.ಪಾಟೀಲ ಹೇಳಿದರು.
ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ ೧ ಮತ್ತು ೨ ರ ವತಿಯಿಂದ ದತ್ತು ಗ್ರಾಮವಾದ ಮುಚಖಂಡಿಯಲ್ಲಿ ಆಯೋಜಿಸಿರುವ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾಯಕತ್ವ ಗುಣ ಬೆಳೆಸಿ ಸಾಮಾಜಿಕ ಕಳಕಳಿ ಕಲ್ಪಿಸುವ ಹಾಗೂ ಯುವಶಕ್ತಿ ಬೆಳವಣಿಗೆ ಗುರಿಯನ್ನು ಸಾಧಿಸುವಲ್ಲಿ ಈ ಎನ್.ಎಸ್.ಎಸ್.ಶಿಬಿರಗಳು ಪ್ರೇರಕವಾಗಿವೆ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಇದೊಂದು ಅಡಿಪಾಯವಾಗಿದೆ. ಶಿಬಿರಾರ್ಥಿಗಳು ವ್ಯಕ್ತಿತ್ವ ವಿಕಾಸವನ್ನುಹೊಂದಿ,ಇಡೀ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್. ಎಂ. ಗಾಂವಕರ್ ಮಾತನಾಡಿ ಇದೊಂದು ಸಾಮಾಜಿಕ ನಾಯಕತ್ವ ಬೆಳವಣಿಗೆ ಜೊತೆಗೆ ವೈಯಕ್ತಿಕವಾಗಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಇದೊಂದು ವೇದಿಕೆಯಾಗಿದೆ. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ನೀವೆಲ್ಲಾ ಭಾಗಿಯಾಗಿರುವುದು ಒಂದು ಸೌಭಾಗ್ಯ ಎಂದರೆ ತಪ್ಪಾಗಲಾರದು ಎಂದು ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಡಾ. ಎನ್. ಹೆಚ್. ಬೇವಿನಹಳ್ಳಿ, ಪದವಿಪೂರ್ವ ಪ್ರಾಚಾರ್ಯರು, ಡಾ. ಡಿ.ಎಸ್. ಲಮಾಣಿ, ಐಕ್ಯುಎಸಿ ಸಂಯೋಜಕರು, ರಾಷ್ಟ್ರೀಯ ಸೇವಾ ಯೋಜನೆ ಘಟಕ ೧ರ ಕಾರ್ಯಕ್ರಮಾಧಿಕಾರಿ ಶಿವಾನಂದ ಶಿವನಗುತ್ತಿ, ಘಟಕ-೨ರ ಕಾರ್ಯಕ್ರಮಾಧಿಕಾರಿ ಶ್ರೀಕಾಂತ ಬಸವನಾಳ, ಶಿಬಿರಾಧಿಕಾರಿ ಎಸ್. ಕೆ. ಜಾಗೀರದಾರ, ಕು. ಲಕ್ಷ್ಮಿ ಮುತ್ತಪ್ಪನವರ, ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು, ಬೋಧಕ ಬೋಧಕರ ಸಿಬ್ಬಂದಿಗಳು ಹಾಜರಿದ್ದರು.