ಸಾಹಿತ್ಯದಿಂದ ವ್ಯಕ್ತಿತ್ವ ವಿಕಸನ, ಮನಸ್ಸಿಗೆ ಆಹ್ಲಾದತೆ
ಸಂಜೆವಾಣಿ ನ್ಯೂಸ್
ಮೈಸೂರು:ಆ:02- ಶಿಕ್ಷಣ ಉದ್ಯೋಗ ಸಂಪಾದನೆಗಾದರೆ ಸದಭಿರುಚಿಯ ಸಾಹಿತ್ಯದ ಓದು ವ್ಯಕ್ತಿತ್ವ ವಿಕಸನ ಮತ್ತು ಮನಸ್ಸಿನ ಆಹ್ಲಾದತೆಗೆ ಸಹಾಯಕಾರಿ ಎಂದು ಕವಿ, ಸಾಹಿತಿ ಡಾ.ಸಂತೋಷ್ ಚೊಕ್ಕಾಡಿ ಅಭಿಪ್ರಾಯಪಟ್ಟರು.
ವಿಜಯ ವಿಠ್ಠಲ ಪದವಿ ಪೂರ್ವ ಕಾಲೇಜಿನ ಸಾಹಿತ್ಯ ಸಂಘದ ವತಿಯಿಂದ ಕನ್ನಡದ ಹಿರಿಯ ಕವಿ ಪು.ತಿ.ನರಸಿಂಹಚಾರ್ ಅವರ ಕವಿ ಕಾವ್ಯ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ ಓದಿನಿಂದ ನಾವು ಮರೆತ ಸಣ್ಣ ಸಣ್ಣ ಮೌಲ್ಯಗಳು ಜಾಗೃತಗೊಳ್ಳುತ್ತವೆ. ಭಾವನಾತ್ಮಕ ಸ್ಪಂದನೆ ಮೂಡಿ ವೃತ್ತಿಯಲ್ಲಿ ಮಾನವೀಯ ಪ್ರಜ್ಞೆ ಮತ್ತು ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯವಾಗುತ್ತದೆ. ವಿದ್ವಾಂಸ, ಸಾಹಿತಿ, ಗೀತ ನಾಟಕಕಾರ ಮತ್ತು ಜಿಜ್ಞಾಸೆಯ ಕವಿ ಪುತಿನ ಅವರ ಹೆಸರು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಸ್ಮರಣೀಯವಾದದ್ದು. ಪುತಿನ ಅವರು ತಮ್ಮ ಕಾವ್ಯ ರಚನೆಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಶ್ರೀಮಂತಿಕೆ ತಂದುಕೊಟ್ಟ ಕವಿ. ಅವರ ಸಾಹಿತ್ಯ ತತ್ವ ಮತ್ತು ಕಾವ್ಯಮೀಮಾಂಸೆಗಳನ್ನು ಒಳಗೊಂಡಂತಹ ಅಪರೂಪದ ರಚನೆ. ಬಾಹ್ಯದ ಆಚರಣೆಗಿಂತ ಮಾನವೀಯ ಅಂತಃಕರಣಗಳನ್ನು ಅವರ ಸಾಹಿತ್ಯದಲ್ಲಿ ಕಾಣಬಹುದಾಗಿದೆ ಎಂದರು.
ಸಂಪ್ರದಾಯ ಬದ್ಧತೆಯಿಂದ ವೈಚಾರಿಕ ಸಂಗತಿಗಳನ್ನು ತಿಳಿಸುವ ಶಕ್ತಿ ಇವರ ಕಾವ್ಯದ್ದಾಗಿತ್ತು. ಅಪೂರ್ವ ಸಂಗೀತದ ಜ್ಞಾನದೊಂದಿಗೆ ಸಾಹಿತ್ಯ ರಚಿಸುತ್ತಿದ್ದರು. ಇವರ ಕಾವ್ಯಗಳಲ್ಲಿ ತತ್ವಾನ್ವೇಷಣೆ, ಜ್ಞಾನಾನ್ವೇಷಣೆ, ಮುಂತಾದ ಆದರ್ಶಗಳನ್ನು ಕಾಣಬಹುದು. ಪುತಿನ ಅವರು ಹೊರಗಿನ ಕತ್ತಲಲ್ಲಿ ಒಳಗಿನ ಬೆಳಕನ್ನು ಕಾಣುವ ದರ್ಶನ ಕವಿ. ಕಾವ್ಯದಿಂದ ಹೃದಯದ ಶುದ್ಧಿ, ಹಾಸ್ಯಪ್ರಜ್ಞೆ, ವ್ಯಕ್ತಿಯ ಮನೋಧರ್ಮ ವಿಕಾಸವಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ನಿರಂತರ ಸಾಹಿತ್ಯ ಅಧ್ಯಯನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ವಿಜಯ ವಿಠಲ ಕಾಲೇಜಿನ ಪ್ರಾಚಾರ್ಯ ಹೆಚ್.ಸತ್ಯಪ್ರಸಾದ್ ಮಾತನಾಡಿ, ಸಾಹಿತ್ಯ ರಚನೆ, ಸಾಹಿತ್ಯದ ಓದು ಮನುಷ್ಯನ ಸಂಕುಚಿತ ಮನೋಭಾವ ಹೋಗಲಾಡಿಸಿ ಮನೋವಿಕಾಸ ಉಂಟು ಮಾಡುತ್ತದೆ. ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೂ ಸಾಹಿತ್ಯದ ಓದು ನಮ್ಮ ಹವ್ಯಾಸವಾಗಿರಬೇಕು. ಕವಿಗಳು ತಮ್ಮ ಕೃತಿಗಳ ಮೂಲಕ ಸದಾ ಸ್ಮರಣೀಯರಾಗಿರುತ್ತಾರೆ. ಕವಿಗಳ ಜೀವನ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಹೇಳಿದರು.
ವಿಜಯ ವಿಠಲ ವಿದ್ಯಾಸಂಸ್ಥೆಗಳ ಗೌರವ ಕಾರ್ಯದರ್ಶಿ ಆರ್.ವಾಸುದೇವ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಎಸ್.ಎಸ್.ರಮೇಶ್, ಅನಿತಾ.ಎನ್, ಸಂಸ್ಕøತ ಉಪನ್ಯಾಸಕ ಕೆ.ವಿ.ಸಂಜಯ ಅವರು ಉಪಸ್ಥಿತರಿದ್ದರು.