ಗಾಂಧಿ ಶಿಲ್ಪ ಬಜಾರ್ ಹಸ್ತಶಿಲ್ಪ ಪ್ರದರ್ಶನ
ಸಂಜೆವಾಣಿ ನ್ಯೂಸ್
ಮೈಸೂರು:ಆ:02- ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದ ರಿಂಗ್ ರಸ್ತೆಯಲ್ಲಿರುವ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಆ.2ರಿಂದ 8ರವರೆಗೆ ಗಾಂಧಿ ಶಿಲ್ಪ ಬಜಾರ್ ಹಸ್ತಶಿಲ್ಪ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ ಎಂದು ಜೆಎಸ್‍ಎಸ್ ಮಹಾ ವಿದ್ಯಾಪೀಠ ಪ್ರಕಟಣ ವಿಭಾಗದ ನಿರ್ದೇಶಕ ಪೆÇ್ರ.ಮೊರಬದ ಮಲ್ಲಿಕಾರ್ಜುನ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಹಲವು ರಾಜ್ಯಗಳಿಂದ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಕುಶಲಕರ್ಮಿಗಳು ಸೇರಿದಂತೆ ಸುಮಾರು 50 ರಿಂದ 60 ಕುಶಲಕರ್ಮಿಗಳು, ಕೈಮಗ್ಗ ನೇಕಾರರು ತಮ್ಮ ಉತ್ಕೃಷ್ಟ ಕಲಾವಸ್ತುಗಳನ್ನು ಮೈಸೂರಿನಲ್ಲಿ ನಡೆಯುವ ಪ್ರದರ್ಶನದಲ್ಲಿ ಅನಾವರಣಗೊಳಿಸಲಿದ್ದಾರೆ. ಮರದ ಕೆತ್ತನೆ, ಶಿಲಾ ಶಿಲ್ಪ, ಕಂಚಿನ ವಿಗ್ರಹಗಳು, ಮರದ ಕುಂದಣ ಕಲೆ, ಮಣ್ಣಿನ ಮಡಿಕೆಗಳು, ಪೇಪರ್, ರತ್ನಗಂಬಳಿ, ಹತ್ತಿ ಜಮಕಾನ, ಇಮಿಟೇಶನ್ ಆಭರಣಗಳು, ಮರದ ಅರಗಿನ ಕಲಾವಸ್ತುಗಳು, ಬಾಟಿಕ್, ಕಲಾಂಕಾರಿ ಚಿತ್ರಕಲೆ, ಚರ್ಮದ ಆಕರ್ಷಕ ವಸ್ತುಗಳು,ಕಲಾತ್ಮಕ ಚರ್ಮದ ಚಪ್ಪಲಿಗಳು, ಚನ್ನಪಟ್ಟಣದ ಗೊಂಬೆಗಳು, ಕಸೂತಿ ಕಲೆ, ಮಧ್ಯಪ್ರದೇಶ ರಾಜ್ಯದ ಮಹೇಶ್ವರಿ, ಚಂದೇರಿ ಸೀರೆಗಳು, ಒಡಿಶಾ ರಾಜ್ಯದ ಪಟ್ಟ ಚಿತ್ರ, ಬೆಳ್ಳಿಯ ಸೂಕ್ಷ್ಮ ವಿನ್ಯಾಸ ವಸ್ತುಗಳು, ಬಿದಿರು-ಬೆತ್ತದ ವಸ್ತುಗಳು, ಚಿಕನ್ ಎಂಬ್ರಾಯ್ಡರಿ, ಕಲಾತ್ಮಕ ಕಲ್ಲಿನ ವಸ್ತುಗಳು, ಪಂಜಾಬ್ ರಾಜ್ಯದ ಫುಲ್ಕಾರಿ ಬಟ್ಟೆಗಳು ಈ ಮೇಳದಲ್ಲಿ ಒಂದೇ ಸೂರಿನಡಿ ಖರೀದಿಗೆ ಸಿಗಲಿದೆ ಎಂದು ಮಾಹಿತಿ ನೀಡಿದರು.
ಆ.2ರ ಸಂಜೆ ನಾಲ್ಕಕ್ಕೆ ಶಾಸಕ ಜಿ.ಟಿ.ದೇವೇಗೌಡ ಚಾಲನೆ ನೀಡುವರು. ಈ ಪ್ರದರ್ಶನ ಮತ್ತು ಮಾರಾಟ ನಿತ್ಯ ಬೆಳಗ್ಗೆ 10.30 ರಿಂದ ರಾತ್ರಿ 9ರವರೆಗೆ ತೆರೆದಿರಲಿದೆ. ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದರು.
ಗೋಷ್ಠಿಯಲ್ಲಿ ಅರ್ಬನ್ ಹಾತ್ ಸಂಯೋಜಕ ಎಂ.ಶಿವನಂಜಸ್ವಾಮಿ, ಕೆ.ಎಸ್.ಸುನಿಲ್ ಕುಮಾರ್, ರಾಕೇಶ್ ರೈ ಹಾಜರಿದ್ದರು.