ದುಶ್ಚಟಗಳ ಮುಕ್ತ ಸಮಾಜಕ್ಕೆ ಡಾ. ಮಹಾಂತಪ್ಪಗಳ ಶ್ರಮ: ಸುಬೇದಾರ
ಆಳಂದ:ಆ.೨: ದುಶ್ಚಟಗಳ ಮುಕ್ತ ಹಾಗೂ ಸ್ವಾಸ್ಥö್ಯ ಸಮಾಜ ನಿರ್ಮಾಣಕ್ಕೆ ಜೀವನ ಮುಡಿಪಾಗಿಟ್ಟಿದ್ದ ನಾಡಿನ ಇಳಕಲ್ ಮಠದ ಡಾ. ಮಹಾಂತಪ್ಪಗಳವರು ತಮ್ಮ ಜೋಳಿಗೆಯ ಮೂಲಕ ಜನರ ದುಶ್ಚಟಗಳನ್ನು ನಿರ್ಮೂಲನೆಗೆ ಶ್ರಮಿಸಿ ನಾಡಿಗೆ ಬಹುದೊಡ್ಡ ಸಂದೇಶವನ್ನು ಕೊಟ್ಟು ಕೃತಿಯಲ್ಲಿ ತಂದವರಾಗಿದ್ದರು ಎಂದು ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರು ಇಂದಿಲ್ಲಿ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧನಲ್ಲಿ ಗುರುವಾರ ತಾಲೂಕು ಆಡಳಿತ ಆಶ್ರಯದಲ್ಲಿ ಹಮ್ಮಿಕೊಂಡ ಇಳಕಲ್ ಮಠದ ಲಿಂ. ಡಾ. ಮಹಾಂತಪ್ಪಗಳ ಜನ್ಮದಿನಾಚರಣೆ ಅಂಗವಾಗಿ ಶ್ರೀಗಳ ಭಾವಚಿತ್ರಕ್ಕೆ ಪೂಜೆ ನೆರವೇರಿ ಮತ್ತು ಶ್ರೀಗಳ ಸಾರಿದ ಸಂದೇಶದ ಪ್ರತಿಜ್ಞೆಯನ್ನು ಬೋಧಿಸಿ ಅವರು ಮಾತನಾಡಿದರು.
‘ಮಹಾಂತ ಜೋಳಿಗೆ’ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿದ್ದ ಇಳಕಲ್-ಚಿತ್ತರಗಿಯ ವಿಜಯ ಮಹಾಂತ ಸಂಸ್ಥಾನ ಮಠದ ಪೂಜ್ಯ ಶ್ರೀ ಡಾ. ಮಹಾಂತಪ್ಪಗಳವರ ನಾಡು ಸೇರಿ ದೇಶದ ಹಲವಡೆ ಸಂಚರಿಸಿ ಜನರ ದುಶ್ಚಟಗಳ ಸಾಮಗ್ರಿ ತಮ್ಮ ಜೋಳಿಗೆಯಲ್ಲಿ ಹಾಕಿಸಿಕೊಂಡು ಪ್ರಮಾಣ ವಚನ ಮಾಡಿಸಿಕೊಂಡು ಚಟಗಳನ್ನು ಬಿಡಿಸಿ ಜನರ ಬದುಕನ್ನು ಹಸನಾಗಿಸುವಲ್ಲಿ ಶ್ರಮ ಮತ್ತು ತ್ಯಾಗವನ್ನು ಸಮಾಜಕ್ಕೆ ದಿಕ್ಸೂಚಿಯಾಗಿದೆ ಎಂದು ಹೇಳಿದರು. ಇಂದು ಸಮಾಜದಲ್ಲಿ ಪ್ರತಿಯೊಬ್ಬರು ದಶ್ಚಟಗಳಿಂದ ಮುಕ್ತರಾಗಿ ಅವರ ತತ್ವಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಲು ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಿರಸ್ತೆದಾರ ರಾಕೇಶ ಶೀಲವಂತ, ಕಂದಾಯ ನಿರೀಕ್ಷಕ ಶರಣಬಸಪ್ಪ ಹಕ್ಕಿ, ಗ್ರಾಮ ಆಡಳಿತಾಧಿಕಾರಿ ಆನಂದ ಪೂಜಾರಿ, ಆಕಾಶ ಸಜ್ಜನ್, ಎಸ್‌ಡಿಎ ಮಹಾದೇವ ಮತ್ತು ಸಾರ್ವಜನಿಕರು ಸಿಬ್ಬಂದಿಗಳು ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.