ಸಿಎಂ ಕೆಳಗಿಳಿಸಲು ಬಿಜೆಪಿ ಎಜೆಂಟ್ ಆಗಿ ರಾಜ್ಯಪಾಲರ ಬಳಕೆ: ಲಕ್ಷ್ಮಣ್ ಆರೋಪ
ಸಂಜೆವಾಣಿ ನ್ಯೂಸ್
ಮೈಸೂರು:ಆ:02- ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಸಲು ಬಿಜೆಪಿ-ಜೆಡಿಎಸ್ ನಾಯಕರು ರಾಜ್ಯಪಾಲರನ್ನು ಏಜೆಂಟ್ ಆಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದರು.
ಕಾಂಗ್ರೆಸ್ ಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಯಾವುದೇ ಪಕ್ಷದ ಏಜೆಂಟ್ ಅಲ್ಲ. ಅವರು ಬಿಜೆಪಿ ಪರವಾಗಿ ಕೆಲಸ ಮಾಡಿದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರಿಗೆ ತೊಂದರೆ ಕೊಡಲು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ, ಶಾಸಕ ಅಶ್ವತ್?ಥ ನಾರಾಯಣ ಸಂಚು ಮಾಡಿದ್ದಾರೆ. ಸಂಚು ಮಾಡಿಲ್ಲವೆಂದು ಧರ್ಮಸ್ಥಳದ ಮಂಜುನಾಥನ ಮೇಲೆ ಆಣೆ ಮಾಡಲೆಂದು ಸವಾಲೆಸೆದರು.
ರಾಜ್ಯಪಾಲರಿಗೆ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ಸಲ್ಲಿಸುತ್ತಾರೆ. ರಾಜ್ಯಪಾಲರು ಕೂಡಲೇ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಮಾಹಿತಿ ಕೇಳುತ್ತಾರೆ. ರಾಜ್ಯಪಾಲರು ಬಿಜೆಪಿ-ಜೆಡಿಎಸ್ ನಾಯಕರ ಅಭಿಪ್ರಾಯ ಪಡೆದು ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದರು.
ಸಿದ್ದರಾಮಯ್ಯ ಅವರ ಕುಟುಂಬದವರು ಖಾಸಗಿ ಜಮೀನು ಖರೀದಿಸಿದರೆ ಸರ್ಕಾರಕ್ಕೆ ಯಾವ ರೀತಿ ನಷ್ಟವಾಗುತ್ತದೆ? 14 ನಿವೇಶನ ಪಡೆಯಲು ಸಿದ್ದರಾಮಯ್ಯ ಪ್ರಭಾವ ಬಳಸಿದ್ದಾರೆ ಎಂದು ದೂರಿನಲ್ಲಿ ಆಪಾದಿಸಿದ ಮಾತ್ರಕ್ಕೆ ಮುಖ್ಯಮಂತ್ರಿ ವಿರುದ್ಧ ಕ್ರಮ ಕೈಗೊಳ್ಳಬಹುದೇ? ಅಬ್ರಹಾಂ ಕೊಟ್ಟ ದೂರೇ ಅಂತಿಮವೇ? ಎಂದು ಪ್ರಶ್ನಿಸಿದರು.
ರಾಜ್ಯಪಾಲರು ರಾಜಭವನವನ್ನು ಬಿಜೆಪಿ ಕಚೇರಿ ಮಾಡಬೇಡಿ. ಟಿ.ಜೆ. ಅಬ್ರಹಾಂ ಸಲ್ಲಿಸಿರುವ 20 ಪುಟಗಳ ದೂರನ್ನು ಓದಿದರೆ ರಾಜಭವನದಲ್ಲಿ ಬಿಜೆಪಿ ನಾಯಕರು ಕುಳಿತು ಸಿದ್ಧಪಡಿಸಿರುವಂತಿದೆ. ಇದರ ವಿರುದ್ಧ ಜನರ ಮಧ್ಯೆ ಹೋಗುತ್ತೇವೆ. ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದರು.
ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿರುವುದನ್ನು ಸಹಿಸದೇ ಅತೀ ಹಿಂದುಳಿದ ವರ್ಗದ ಮುಖ್ಯಮಂತ್ರಿಗೆ ತೊಂದರೆ ಕೊಡಲು, ದಲಿತ ಅಲ್ಪಸಂಖ್ಯಾತರಿಗೆ ಅವಮಾನ ಮಾಡಲು ಬಿಜೆಪಿ, ಜೆಡಿಎಸ್ ನಾಯಕರು ಮುಂದಾಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ರಾಜ್ಯದಲ್ಲಿ ಉಂಟಾಗುವ ಅಶಾಂತಿಗೆ ಬಿಜೆಪಿ, ಜೆಡಿಎಸ್ ನಾಯಕರು ಕಾರಣರಾಗುತ್ತಾರೆ ಎಂದು ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ.ಜೆ. ವಿಜಯ್‍ಕುಮಾರ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಬೀಳಿಸುವ ಪ್ರಯತ್ನ ಮಾಡಿದರೆ ಕ್ರಾಂತಿಯಾಗುತ್ತದೆ. ಬಿಜೆಪಿಯ ಪ್ರತಿ ಹೋರಾಟಕ್ಕೆ ನಾವು ಸಿದ್ಧರಾಗಿದ್ದೇವೆ. ಹೈಕಮಾಂಡ್‍ನಿಂದ ಸೂಚನೆ ಬಂದ ತಕ್ಷಣ ಬೀದಿಗಿಳಿಯುತ್ತೇವೆ ಎಂದರು.
ಆ. 3ರಂದು ಬಿಜೆಪಿ ಪಾದಯಾತ್ರೆ ಮಾಡುವುದಿಲ್ಲ ಎಂಬ ಮಾಹಿತಿ ಬಂದಿದೆ. ರಾಜ್ಯದಲ್ಲಿ ಎಲ್ಲಿಯೇ ಬಿಜೆಪಿ ಯ್ರ್ಲಿ, ಪಾದಯಾತ್ರೆ ಮಾಡಿದರೆ ಪ್ರತಿಯಾಗಿ ಹೋರಾಟಕ್ಕೂ ನಾವು ಸಿದ್ಧರಾಗಿದ್ದೇವೆ ಎಂದು ಹೇಳಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಬಿ.ಎಂ. ರಾಮು, ಎಚ್.ವಿ. ರಾಜೀವ್, ಭಾಸ್ಕರ್, ಶಿವಪ್ರಸಾದ್, ಸಂತೋಷ್, ಶಿವಣ್ಣ, ಗಿರೀಶ್, ಕೆ. ಮಹೇಶ್, ತಿಮ್ಮಯ್ಯ, ಶಾಂತರಾಜು ಭಾಗವಹಿಸಿದ್ದರು.