ಗುಡ್ಡ ಕುಸಿತ ಪ್ರಕರಣ: ಮೃತ ಕುಟುಂಬಗಳಿಗೆ ಸಾಂತ್ವಾನ ಹೇಳಿದ ನಿಖಿಲ್ ಕುಮಾರಸ್ವಾಮಿ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.02: ಪ್ರಾಕೃತಿಕ ವಿಕೋಪಗಳ ಮುಂದೆ ಮಾನವನ ಆಟ ಏನೂ ನಡೆಯುವುದಿಲ್ಲ ಪ್ರಕೃತಿ ಮುನಿದರೆ ನಾವೆಲ್ಲರೂ ಶೂನ್ಯ ಎಂಬುದನ್ನು ಅರಿಯಬೇಕಿದೆ ಎಂದು ರಾಜ್ಯ ಯುವಜನತಾದಳದ ರಾಜ್ಯಾದ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಅವರು ತಾಲ್ಲೂಕಿನ ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮದಲ್ಲಿ ಕೇರಳದ ವಯನಾಡಿನಲ್ಲಿ ಗುಡ್ಡ ಕುಸಿದು ಮರಣ ಹೊಂದಿದ ಮೃತರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿ ವೈಯಕ್ತಿಕವಾಗಿ ಧನಸಹಾಯ ಮಾಡಿ ಮಾತನಾಡಿದರು.
ಚಿಕ್ಕ ಮಗು ನಿಹಾನ್ ಹಾಗೂ ಕುಟುಂಬದ ಸದಸ್ಯೆ ಲೀಲಾವತಿಯವರನ್ನು ಕಳೆದುಕೊಂಡಿರುವ ನಿಮ್ಮ ಕುಟುಂಬದ ವೇದನೆ ನನಗೆ ಅರ್ಥವಾಗುತ್ತದೆ. ಝಾನ್ಸಿ ಹಾಗೂ ದೇವರಾಜು ಮತ್ತು ಅನಿಲ್ ರವರುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಶೀಘ್ರವಾಗಿ ಗುಣಮುಖರಾಗಿ ವಾಪಸ್ ಬರಲಿ. ಕೆಲಸದ ನಿಮಿತ್ತ ವಯನಾಡಿನಲ್ಲಿ ಕಳೆದ 40 ವರ್ಷಗಳಿಂದ ನೆಲೆಸಿ ಶ್ರಮಿಕ ಜೀವನ ಸಾಗಿಸುತ್ತಿದ್ದ ಕುಟುಂಬಕ್ಜೆ ಈ ಘಟನೆಯು ಆಘಾತಕಾರಿಯಾಗಿದ್ದು ನಮ್ಮ ಮನೆಯ ಸದಸ್ಯರನ್ನು ಕಳೆದುಕೊಂಡಷ್ಟು ವೇದನೆಯಾಗುತ್ತಿದೆ. ಝಾನ್ಸಿ ಅವರ ಪತಿ ಅನಿಲ್‍ಕುಮಾರ್ ಸೌಧಿಯಲ್ಲಿ ಉದ್ಯೋಗಿಯಾಗಿದ್ದು ಪತ್ನಿ ಹಾಗೂ ಮಕ್ಕಳನ್ನು ಸೌಧಿ ಕರೆದುಕೊಂಡು ಹೋಗಲು ಸಿದ್ದತೆ ನಡೆಸಿದ್ದು ಅದಕ್ಕಾಗಿಯೇ ಇತ್ತೀಚೆಗೆ ರಜೆಯ ಮೇಲೆ ಕೇರಳದ ಮುಂಡಕೈಗೆ ಆಗಮಿಸಿದ್ದರೆನ್ನಲಾಗಿದೆ. ಸೌಧಿಗೆ ಹೋಗುವ ಮುನ್ನ ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿರುವ ಅತ್ತೆಯ ಮನೆಗೆ ಬಂದು ಹೋಗಲು ಸಿದ್ದತೆ ನಡೆಸಿದ್ದರು. ಆದರೆ ಅತ್ತೆಯ ಮನೆಗೆ ಬರುವ ಮುನ್ನವೇ ಅವರ ಕುಟುಂಬ ದುರಂತಕ್ಕೆ ಒಳಗಾಗಿದೆ. ಕೇಂದ್ರ ಸಚಿವ ಕುಮಾರಣ್ಣ ರಾಜ್ಯದ ಜನತೆಯ ಮೃತದೇಹಗಳನ್ನು ತಲುಪಿಸಲು ನಿರಂತರವಾಗಿ ಸಂಪರ್ಕದಲ್ಲಿ ಇದ್ದಾರೆ. ಅಲ್ಲಿನ ಪ್ರತಿ ಕ್ಷಣದ ಘಟನೆಗಳ ವಿವರಗಳನ್ನು ಪಡೆಯುತ್ತಿದ್ದು ಮೃತದೇಹಗಳನ್ನು ನಿಮಗೆ ತಲುಪಿಸುವ ಕೆಲಸವನ್ನು ಮಾಡಲಾಗುವುದು.
ನೀವುಗಳು ಧೈರ್ಯವಾಗಿ ಇರಬೇಕು. ಭಗವಂತನ ಇಚ್ಚೆಯಂತೆ ಎಲ್ಲವೂ ಸಾಗಲಿದೆ. ಪ್ರಕೃತಿ ಮುನಿದರೆ ಮಾನವ ಏನು ತಾನೆ ಮಾಡಲು ಸಾಧ್ಯ. ಭಗವಂತ ಕುಟುಂಬದ ಸದಸ್ಯರನ್ನ ಕಳೆದುಕೊಂಡ ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದರು.
ಇನ್ನು ದುರಂತದಲ್ಲಿ ನಿಧನರಾಗಿದ್ದ ನಿಹಾಲ್ ಹಾಗೂ ಲೀಲಾವತಿಯವರ ಮೃತ ದೇಹಗಳನ್ನು ರಾತ್ರಿ ಏಳು ಗಂಟೆ ವೇಳೆಗೆ ಕತ್ತರಘಟ್ಟ ಗ್ರಾಮಕ್ಕೆ ತರಲಾಯಿತು ಕುಟುಂಬದವರು ರಾತ್ರಿಯೇ ಅಂತ್ಯಸಂಸ್ಕಾರ ನೆರವೇರಿಸಿದರು.
ಸರ್ಕಾರದ ವಿರುದ್ಧ ಪಾದಯಾತ್ರೆ:-
ನಮ್ಮದು ರೈತರ ಪಕ್ಷ ಪಾದಯಾತ್ರೆ ಬಗ್ಗೆ ವರಿಷ್ಠರು ತೀರ್ಮಾನಿಸುತ್ತಾರೆ.
ರಾಜ್ಯ ಸರ್ಕಾರದ ವಿರುದ್ದ ಪಾದಯಾತ್ರೆ ಮಾಡುವ ಸಂಬಂಧ ಜಿ.ಟಿ.ದೇವೇಗೌಡರ ಸಮ್ಮುಖದಲ್ಲಿ ಜೆಡಿಎಲ್‍ಪಿ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಹೆಚ್.ಟಿ.ಮಂಜು, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮು, ಎಂಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಹೆಚ್.ಕೆ.ಅಶೋಕ್, ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್, ಶಾಸಕರ ಸಹೋದರ ಹೆಚ್.ಟಿ.ಲೋಕೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.