ರೆಕಾರ್ಡ್ ರೂಂನಲ್ಲಿ ರೈತರಿಗೆ ಕಿರುಕುಳ: ಕ್ರಮಕ್ಕೆ ರೈತಸಂಘ ಒತ್ತಾಯ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.02: ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿರುವ ಕಂದಾಯ ಇಲಾಖೆಯ ರೆಕಾರ್ಡ್ ರೂಂ ನಲ್ಲಿ ರೈತರು ಅಗತ್ಯ ದಾಖಲೆಗಳನ್ನು ಪಡೆಯಲು ನಿತ್ಯ ಕಿರುಕುಳ ಹಾಗೂ ಸಿಬ್ಬಂಧಿಗಳಿಗೆ ಕೇಳಿದಷ್ಟು ಹಣ ನೀಡಬೇಕಾಗಿದ್ದು ರೈತರ ಸುಲಿಗೆಯನ್ನು ನಿಲ್ಲಿಸುವಂತೆ ತಾಲೂಕು ರೈತಸಂಘ ಒತ್ತಾಯಿಸಿದೆ.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿರುವ ಕಂದಾಯ ಇಲಾಖೆಯ ರೆಕಾರ್ಡ್ ರೂಂನಲ್ಲಿ ದಾಖಲೆ ಪಡೆಯಲು ಅನುಭವಿಸುತ್ತಿರುವ ಕಿರುಕುಳ ಹಾಗೂ ಲಂಚದ ಬಗ್ಗೆ ಸ್ಥಳದಲ್ಲಿದ್ದ ರೈತರಿಂದ ಮಾಹಿತಿ ಪಡೆದ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮತ್ತು ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ದಾಖಲೆ ಕೇಂದ್ರದಲ್ಲಿ ರೈತರ ಸುಲಿಗೆಯನ್ನು ನಿಲ್ಲಿಸುವಂತೆ ಒತ್ತಾಯಿಸಿದರು.
ದಾಖಲಾತಿ ಸಂಗ್ರಹ ಕೇಂದ್ರದಲ್ಲಿ ರೈತರು ತಮಗೆ ಬೇಕಾದ ಯಾವುದಾದರೊಂದು ದಾಖಲೆ ಪಡೆಯಲು ಅರ್ಜಿ ನೀಡಿ ಒಂದು ದಾಖಲಾತಿಗೆ 10 ರೂ ಶುಲ್ಕ ಪಾವತಿಸಬೇಕು. ರೈತರು ಪಾವತಿಸಿದ ಹಣಕ್ಕೆ ರೆಕಾರ್ಡ್ ರೂಂ ಸಿಬ್ಬಂಧಿಗಳು ಹಣ ಸಂದಾಯ ರಸೀದಿ ನೀಡಬೇಕು ಈ ಬಗ್ಗೆ ರೆಕಾರ್ಡ್ ರೋಂ ಮುಂದೆ ಮಾಹಿತಿ ಫಲಕ ಹಾಕಬೇಕು. ಆದರೆ ಪಟ್ಟಣದ ಕಂದಾಯ ಇಲಾಖೆಯ ರೆಕಾರ್ಡ್ ರೂಂ ಸಿಬ್ಬಂಧಿಗಳು ರೈತರಿಗೆ ಅಗತ್ಯವಾದ ಮಾಹಿತಿ ಫಲಕ ಅಳವಡಿಸಿಲ್ಲ. ಪ್ರತಿಯೊಂದು ದಾಖಲೆಗೆ ರೈತರು ಸಿಬ್ಬಂಧಿಗಳು ಕೇಳಿದಷ್ಟು ಹಣ ನೀಡಬೇಕಾಗಿದೆ. ರೈತರಿಂದ ಪಡೆದ ಹಣಕ್ಕೆ ರಸೀದಿ ಹಾಕುತ್ತಿಲ್ಲ. ಹೆಚ್ಚು ಹಣಕೊಟ್ಟವರಿಗೆ ತಕ್ಷಣವೇ ಅಗತ್ಯ ದಾಖಲೆ ನೀಡುವ ಸಿಬ್ಬಂಧಿಗಳು ಹಣ ನೀಡದ ರೈತರನ್ನು ಸುಖಾಸುಮ್ಮನೆ ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಕುಂಟು ನೆಪ ಹೇಳಿ ಅನಗತ್ಯವಾಗಿ ಅಲೆಸುತ್ತಿದ್ದಾರೆ. ತಮ್ಮ ಜಮೀನಿನ ದಾಖಲಾತಿ ಪಡೆಯಲು ರೈತರು ಕಿರುಕುಳ ಅನುಭವಿಸಬೇಕಾದ ಸ್ಥಿತಿಯಿದೆ. ರೆಕಾರ್ಡ್ ರೂಂ ತಾಲೂಕು ಆಡಳಿತ ಸೌಧದ ನೆಲಮಾಳಿಗೆಯಲ್ಲಿದ್ದು ರೆಕಾರ್ಡ್ ರೂಂ ಮುಂದೆ ಕನಿಷ್ಠ ಒಂದು ವಿದ್ಯುತ್ ದೀಪದ ವ್ಯವಸ್ಥೆಯಿಲ್ಲ. ಸೂಕ್ತ ಗಾಳಿ ಬೆಳಕಿನ ವ್ಯವಸ್ಥೆಯಿಲ್ಲ. ಮಳೆ ನೀರು ಸೋರಿಕೆಯಾಗಿ ನೆಲ ಮಾಳಿಗೆಯಲ್ಲಿ ನೀರು ನಿಲ್ಲುತ್ತದೆ. ನಿಂತ ನೀರಿನಲ್ಲಿಯೇ ರೈತರು ತಮ್ಮ ದಾಖಲೆ ಪಡೆಯಲು ಘಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿಯಿದೆ. ಈ ಬಗ್ಗೆ ತಹಸೀಲ್ದಾರರ ಗಮನಕ್ಕೆ ತಂದಿದ್ದರೂ ಯಾವುದೇ ಬದಲಾವಣೆಯಾಗಿಲ್ಲ. ತಕ್ಷಣವೇ ದಾಖಲಾತಿ ಸಂಗ್ರಹ ಕೇಂದ್ರದ ಮುಂದೆ ಒಂದು ದಾಖಲೆಗೆ 10 ರೂ ಮಾತ್ರ ಎನ್ನುವ ತಿಳುವಳಿಕೆಯ ಮಾಹಿತಿ ಫಲಕವನ್ನು ಹಾಕಿಸಬೇಕು. ರೈತರಿಂದ ದಾಖಲೆ ನೀಡಲು ಹೆಚ್ಚು ಹಣ ಪಡೆಯುವ ಸಿಬ್ಬಂಧಿಗಳ ವಿರುದ್ದ ಕ್ರಮ ಜರುಗಿಸಬೇಕು. ರೆಕಾರ್ಡ್ ರೂಂ ಮುಂದೆ ರೈತರಿಗೆ ಆಸನಗಳ ವ್ಯವಸ್ಥೆ ಹಾಗೂ ಗಾಳಿ ಬೆಳಕಿನ ವ್ಯವಸ್ಥೆ ಮಾಡುವಂತೆ ರೈತ ಮುಖಂಡರಾದ ಕಾರಿಗನಹಳ್ಳಿ ಪುಟ್ಟೇಗೌಡ ಮತ್ತು ಮರುವನಹಳ್ಳಿ ಶಂಕರ್ ಆಗ್ರಹಿಸಿದ್ದಾರೆ.
ರೈತ ಮುಖಂಡರ ಆಕ್ರೋಶದ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಉಪ ತಹಸೀಲ್ದಾರ್ ಲೋಕೇಶ್ ರೈತರಿಂದ ಯಾವುದೇ ಕಾರಣಕ್ಕೂ ಹೆಚ್ಚು ಹಣ ಪಡೆಯದಂತೆ ಸಿಬ್ಬಂಧಿಗಳಿಗೆ ಸೂಚಿಸಲಾಗಿದೆ. ರೈತರು ಪಡೆಯುವ ಪ್ರತಿಯೊಂದು ದಾಖಲೆಗೂ ತಲಾ 10 ರೂ ಶುಲ್ಕ ಮಾತ್ರ ಎನ್ನುವ ಫಲಕವನ್ನು ರೆಕಾರ್ಡ್ ರೂಂ ಮುಂದೆ ಅಳವಡಿಸುವುದಾಗಿ ತಿಳಿಸಿದರಲ್ಲದೆ ಕೊಠಡಿ ಮುಂದೆ ವಿದ್ಯುತ್ ದೀಪದ ವ್ಯವಸ್ಥೆ ಮಾಡಲಾಗುವುದು. ರೈತರಿಂದ ಅನಗತ್ಯವಾಗಿ ಹೆಚ್ಚು ಹಣ ಕೇಳಿದರೆ ಅಂತಹ ಸಿಬ್ಬಂಧಿಗಳ ವಿರುದ್ದ ರೈತರು ದೂರು ನೀಡಿದರೆ ನಿಯಮಾನುಸಾರ ಕ್ರಮ ಜರುಗಿಸುವುದಾಗಿ ತಿಳಿಸಿದರು.