ಕರ್ನಾಟಕ ಸಾರಿಗೆ ಸಂಸ್ಥಾಪನಾ ದಿನಾಚರಣೆ
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ: ಆ.02:- ಕೆಎಸ್‍ಆರ್‍ಟಿಸಿ ಕೇವಲ ಲಾಭದ ಉದ್ದೇಶದಿಂದ ಮಾತ್ರ ಕಾರ್ಯ ನಿರ್ವಹಿಸದೆ ರಾಜ್ಯದ ಜನರಿಗೆ ಸೇವೆ ಸಲ್ಲಿಸುವ ಸಲುವಾಗಿ ಕೆಲಸ ಮಾಡುತ್ತಿದೆ' ಎಂದು ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಸಂಸ್ಥೆಯ ಅಧ್ಯಕ್ಷ ಜೆ.ಎಸ್.ನಾಗರಾಜ್ ತಿಳಿಸಿದರು. ಕರ್ನಾಟಕ ಸಾರಿಗೆ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಸಂಸ್ಥೆ ವತಿಯಿಂದ ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಂಸ್ಥೆಯ ಚಾಲಕರು, ನಿರ್ವಾಹಕರು ಮತ್ತು ಸಿಬ್ಬಂದಿಯ ಅವಿಶ್ರಮ ಸೇವೆಯಿಂದಾಗಿ ರಾಜ್ಯದ ಸಾರ್ವಜನಿಕರಿಗೆ ಸುಖಕರ ಮತ್ತು ಕ್ಷೇಮಯುತವಾಗಿ ಸಾರಿಗೆ ವ್ಯವಸ್ಥೆ ದೊರಕಲು ಸಾಧ್ಯವಾಗಿದೆ. ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆ(ಶಕ್ತಿ ಯೋಜನೆ) ನೀಡಿರುವುದರಿಂದ ಹೆಚ್ಚಿನ ಅನುಕೂಲವಾಗಿದ್ದು ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಿದೆ’ ಎಂದರು.
ಭಾರತದಲ್ಲಿಯೇ ಅತ್ಯುತ್ತಮ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ಹೆಗ್ಗಳಿಕೆ ಕೆಎಸ್‍ಆರ್‍ಟಿಸಿ ಹೊಂದಿದ್ದು, ಹಲವು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ' ಎಂದರು.ಘಟಕದ ವ್ಯವಸ್ಥಾಪಕ ದರ್ಶನ್ ರಾಮಚಂದ್ ಮಾತ ನಾಡಿ,ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಪ್ರಯಾಣಿಸುವುದರಿಂದ ಸಾರ್ವಜನಿಕ ರಿಗೆ ವಿವಿಧ ಸಂಸ್ಕೃತಿಗಳ ಬಗ್ಗೆ ಪರಿಚಯ ವಾಗಲಿದೆ. ಐಕ್ಯತೆಯ ಪರಿಕಲ್ಪನೆ ಮೂಡಲಿದೆ’ ಎಂದರು.
`ಸಾರ್ವಜನಿಕರು ದೈನಂದಿನ ಚಟುವಟಿಕೆಗಳಲ್ಲಿ ತಮ್ಮ ಸ್ವಂತ ವಾಹನಗಳನ್ನು ಬದಿಗಿಟ್ಟು, ಸಾಮೂಹಿಕ ಸಾರಿಗೆ ವಾಹನಗಳಲ್ಲಿ ಸಂಚರಿಸುವುದರಿಂದ ಇಂಧನ ಉಳಿತಾಯವಾಗುವುದರ ಜೊತೆಗೆ ವಾಯುಮಾಲಿನ್ಯವು ತಗ್ಗಲಿದೆ’ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿ, ಸಂಚಾರ ನಿಯಂತ್ರಕರು ಮತ್ತು ಘಟಕ ವ್ಯವಸ್ಥಾಪಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಚಾರ ನಿಯಂತ್ರಕ ಶಿವಕುಮಾರ್, ರೋಟರಿ ಕಾರ್ಯದರ್ಶಿ ಬಿ.ಎಸ್.ಪ್ರಸನ್ನ ಕುಮಾರ್, ಖಜಾಂಚಿ ಬಿ.ಆರ್.ಗಣೇಶ್, ಸದಸ್ಯರಾದ ಸಿ.ಎನ್.ವಿಜಯ್, ಎಸ್.ರಮೇಶ್, ರವಿಚಂದ್ರ, ಸತೀಶ್ ಆರಾಧ್ಯ, ಧನಂಜಯ್, ಕೆ.ಬಿ.ಮಹೇಶ್ ಇದ್ದರು.
ಪಿರಿಯಾಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಗುರುವಾರ ನಡೆದ ಸಾರಿಗೆ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಕೆಎಸ್‍ಆರ್‍ಟಿಸಿ ಇಲಾಖೆಯ ಸಿಬ್ಬಂದಿಯನ್ನು ಗೌರವಿಸಲಾಯಿತು. ಘಟಕ ವ್ಯವಸ್ಥಾಪಕ ದರ್ಶನ್ ರಾಮಚಂದ್, ರೋಟರಿ ಸಂಸ್ಥೆ ಅಧ್ಯಕ್ಷ ಜೆ.ಎಸ್.ನಾಗರಾಜ್, ಕಾರ್ಯದರ್ಶಿ ಬಿ.ಎಸ್.ಪ್ರಸನ್ನ ಕುಮಾರ್, ಸದಸ್ಯರಾದ ಸಿ.ಎನ್.ವಿಜಯ್, ಎಸ್.ರಮೇಶ್, ರವಿಚಂದ್ರ, ಸತೀಶ್ ಆರಾಧ್ಯ, ಧನಂಜಯ್ ಭಾಗವಹಿಸಿದ್ದರು.