ಕೊಳ್ಳೇಗಾಲ ಪ್ರವಾಹ ಪೀಡಿತ ಗ್ರಾಮಗಳಿಗೆ ಜಿಲ್ಲಾಧಿಕಾರಿ, ಎಸ್‍ಪಿ ಭೇಟಿ : ಪರಿಶೀಲನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.02- ಕೃಷ್ಣರಾಜಸಾಗರ ಹಾಗೂ ಕಬಿನಿ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಬಿಡಲಾಗಿರುವ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತವಾಗಿರುವ ಕೊಳ್ಳೇಗಾಲ ತಾಲೂಕಿನ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರವಾಹ ಸಂತ್ರಸ್ತ ಗ್ರಾಮಗಳಾದ ದಾಸನಪುರ, ಹಳೆಅಣಗಳ್ಳಿ, ಹಳೆ ಹಂಪಾಪುರ, ಮುಳ್ಳೂರು, ಯಡಕುರಿಯ, ಸೇರಿದಂತೆ ವಿವಿಧ ಭಾಗಗಳಿಗೆ ಭೇಟಿ ನೀಡಿ ಸಮಗ್ರವಾಗಿ ಪರಿಸ್ಥಿತಿಯನ್ನು ಅವಲೋಕಿಸಿದರು.
ದಾಸನಪುರದಲ್ಲಿ ಮನೆ ಮನೆಗೆ ತೆರಳಿದ ಜಿಲ್ಲಾಧಿಕಾರಿಯವರು ಇನ್ನೂ ಹಲವು ಮಂದಿ ಗ್ರಾಮದಲ್ಲೇ ಇದ್ದುದ್ದನ್ನು ಕಂಡು ಕಾಳಜಿ ಕೇಂದ್ರಗಳಿಗೆ ತೆರಳಲು ಮನವೊಲಿಸಿದರು. ನೀರಿನ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಠಿಯಿಂದ ಕಾಳಜಿ ಕೇಂದ್ರಗಳಿಗೆ ತೆರಳಲು ಮನವಿ ಮಾಡಿದರು.
ಹಳೆ ಅಣಗಳ್ಳಿಗೆ ಭೇಟಿ ನೀಡಿ ಅಲ್ಲಿಯೂ ಕೆಲ ಗ್ರಾಮಸ್ಥರು ಇರುವುದನ್ನು ಕಂಡು ನೀರು ಹೆಚ್ಚಾಗುತ್ತಿದೆ ಕಾಳಜಿ ಕೇಂದ್ರಗಳಿಗೆ ತುರ್ತಾಗಿ ತೆರಳಬೇಕೆಂದು ಮನವಿ ಮಾಡಿದರು. ಹಳೆ ಹಂಪಾಪುರಕ್ಕೂ ಭೇಟಿ ಕೊಟ್ಟು ಗ್ರಾಮಸ್ಥರೊಂದಿಗೆ ಮಾತನಾಡಿ ಕಾಳಜಿ ಕೇಂದ್ರದಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ವೈದ್ಯಕೀಯ ಚಿಕಿತ್ಸೆ ನೀಡಲು ಸಹ ಅಗತ್ಯ ಕ್ರಮ ವಹಿಸಲಾಗಿದೆ. ಗ್ರಾಮದಿಂದ ತೆರಳಲು ಬಸ್‍ಗಳ ವ್ಯವಸ್ಥೆ ಮಾಡಲಾಗಿದ್ದು, ಜನರು ನಮ್ಮ ಕೋರಿಕೆಗೆ ಸ್ಪಂದಿಸಬೇಕು ಎಂದರು.
ಮುಳ್ಳೂರು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪ್ರವಾಹ ಕಡಿಮೆಯಾಗುವವರೆಗೂ ಕಾಳಜಿ ಕೇಂದ್ರದಲ್ಲಿಯೇ ಇರಬೇಕು. ಆಸ್ಪತ್ರೆ, ಆಂಬುಲೆನ್ಸ್ ಸೇರಿದಂತೆ ಎಲ್ಲ ವ್ಯವಸ್ಥೆಗಳು ಇರಲಿವೆ. ಊಟೋಪಚಾರ, ಇನ್ನಿತರ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಯಾವುದೇ ತೊಂದರೆ ಇದ್ದರೂ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ಹೇಳಿದರು.
ಯಡಕುರಿಯ ಗ್ರಾಮಕ್ಕೆ ಭೇಟಿ ಕೊಟ್ಟು ಅಲ್ಲಿನ ಅಹವಾಲುಗಳನ್ನು ಆಲಿಸಿದರು. ಜಿಲ್ಲಾಡಳಿತದಿಂದ ಸಹಾಯವಾಣಿ ತೆರೆಯಲಾಗಿದ್ದು ಎಲ್ಲ ನೆರವು ನೀಡಲಾಗುತ್ತದೆ. ಸಮಸ್ಯೆಗಳಿದ್ದಲ್ಲಿ ತಿಳಿಸಬೇಕು ಎಂದರು.
ವೆಸ್ಲಿ ಸೇತುವೆಗೂ ಭೇಟಿ ನೀಡಿ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿಯವರು ಸ್ಥಳೀಯ ಪ್ರವಾಸಿ ತಾಣಗಳಿಗೆ ನಿಷೇಧ ಇರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೆಲ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆಪ್ಪದಲ್ಲಿ ತೆರಳಿ ಪರಿಶೀಲನೆ ನಡೆಸಿದರು. ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರಿಗೆ ಸಿದ್ದಪಡಿಸಲಾಗಿದ್ದ ಊಟ ಪರಿಶೀಲಿಸಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಸಂತ್ರಸ್ತರಿಗೆ ಊಟ ಬಡಿಸಿದರು.
ಭೇಟಿಯ ವೇಳೆ ಜಾನುವಾರುಗಳಿಗೆ ಮೇವು ವಿತರಣೆ ಮಾಡಿದರು. ಪ್ರವಾಹ ಪೀಡಿತ ಪ್ರದೇಶಗಳ ಕಾರ್ಯಾಚರಣೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳಿಗೆ ನಿಯೋಜಿತರಾಗಿರುವ ತಂಡಗಳೊಂದಿಗೆ ಸಮಾಲೋಚನೆ ನಡೆಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಮಹೇಶ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಪಿ. ಲಕ್ಷ್ಮಿ, ಇತರೆ ಅಧಿಕಾರಿಗಳು ಇದ್ದರು.