ಮಧುರ ಚೆನ್ನರ ೧೨೧ನೇ ಜಯಂತಿ ಆಚರಣೆ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೨:ಹಲಸಂಗಿ ಗೆಳೆಯರ ಪ್ರತಿಷ್ಠಾನದ ವತಿಯಿಂದ ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಧುರಚೆನ್ನರ ೧೨೧ನೇ ಜನ್ಮದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಡಾ. ಸಂಗಮನಾಥ ಲೋಕಾಪುರ ಮಾತನಾಡಿ, ಮಧುರಚೆನ್ನರು ಕಷ್ಟಕರವಾದ ಜೀವನ ನಡೆಸುತ್ತಿದ್ದರೂ ೧೯೨೧ರಲ್ಲಿ ನಾಲ್ಕು ಜಿಲ್ಲೆಯ ಮುಲ್ಕಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದರು. ಮಧುರಗೀತ ಹಾಗೂ ಸಾಹಿತ್ಯದ ಮೂಲಕ ನಾಡಿನ ಹೆಸರಾಂತ ಸಾಹಿತಿಗಳನ್ನು ಹಲಸಂಗಿ ಎಂಬ ಚಿಕ್ಕ ಊರಿನತ್ತ ಕರೆತಂದು ಸಾಹಿತ್ಯದ ಘಮಲು ಪಸರಿಸಲು ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಹಲಸಂಗಿಯ ಮಾವಿನಮರದ ಮಧುರತೆ ಹಾಗೂ ನವಿಲು ಕುಣಿತದ ಬಗ್ಗೆ ನಾಡಿಗೆ ಪರಿಚಯಿಸಿ, ಹಲಸಂಗಿ ಗೆಳಯರ ಸಾಹಿತ್ಯ ಕೃಷಿಯಿಂದ ಸಾಹಿತ್ಯ ಕ್ಷೇತ್ರದಲ್ಲಿ ವಿಜಯಪುರ ಜಿಲ್ಲೆಯನ್ನು ಶ್ರೀಮಂತಗೊಳಿಸಲು ಅವಿರತ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.
ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಸಿ.ಬಿ. ನಾಟೀಕಾರ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಹಲಸಂಗಿ ಗೆಳೆಯರ ಪ್ರತಿಷ್ಠಾನದÀ ಸದಸ್ಯ ಸಂಚಾಲಕÀ ಡಿ.ಬಿ.ಭಜಂತ್ರಿ ಹಾಗೂ ಜೆ.ಎಸ್. ಗಲಗಲಿ, ಎ.ಎ. ಪಾರಸಿ ಉಪಸ್ಥಿತರಿದ್ದರು. ಶ್ರೀದೇವಿ ಪತ್ತಾರ ಹಾಗೂ ತಂಡ ಸುಗಮ ಸಂಗೀತ ಗಾಯನ ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು.