ಶುದ್ಧ ಸಮಾಜಕ್ಕಾಗಿ ಜೋಳಿಗೆ ಹಿಡಿದ ಮಹಾಂತ ಶಿವಯೋಗಿಗಳು
ಸಂಜೆವಾಣಿ ವಾರ್ತೆ
ಔರಾದ :ಆ.೨: ಜೋಳಿಗೆ ಮೂಲಕ ದುಶ್ಚಟಗಳ ಭಿಕ್ಷೆ ಪಡೆದ ಡಾ.ಮಹಾಂತ ಶಿವಯೋಗಿಗಳು ಶುದ್ಧ ಸಮಾಜಕ್ಕಾಗಿ ತ್ಯಾಗ ಮಯಿ ಜೀವನ ಮಾಡಿದ ಮಹಾನ್ ಸಂತರಲ್ಲಿ ಒಬ್ಬರಾಗಿದ್ದರು ಎಂದು ಮದರ್ ತೆರೇಸಾ ಪ್ರಾಥಮಿಕ ಶಾಲೆಯ ಮುಖ್ಯ ಗುರು ಜಯವಂತ ಉಜನಿಕರ ಹೇಳಿದರು.
ಗುರುವಾರ ತಾಲ್ಲೂಕಿನ ವಡಗಾಂವ್ (ದೆ )ಮದರ್ ತೆರೇಸಾ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ .ಮಹಾಂತ ಶಿವಯೋಗಿಗಳ ಜಯoತೋತ್ಸವ ದಲ್ಲಿ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು,ಬಾಗಲಕೋಟೆಯ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನವನ್ನು ರಾಜ್ಯದಲ್ಲಿ ವ್ಯಸನ ಮುಕ್ತ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತದೆ. ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಡಾ. ಮಹಾಂತ ಶಿವಯೋಗಿಗಳು ಬಾಗಲಕೋಟೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ೧೯೩೦ ರ ಆಗಸ್ಟ್ ೧ ರಂದು ಜನಿಸಿದ ಅವರು ತಮ್ಮ ೧೦ನೇ ವಯಸ್ಸಿಗೆ ಸವದಿಯ ವಿರಕ್ತಮಠದ ಕಿರಿಯ ಸ್ವಾಮೀಜಿಗಳಾದರು.
ಡಾ. ಮಹಾಂತ ಶಿವಯೋಗಿ ಸ್ವಾಮೀಜಿಯವರು ‘ವ್ಯಸನ ಮುಕ್ತ ಸಮಾಜ’ ನಿರ್ಮಾಣಕ್ಕೆ ೧೯೭೫ ರಿಂದ ಸಾಮಾಜಿಕ ಕ್ರಾಂತಿಗೆ ಮುನ್ನಡಿ ಬರೆದರು. ಮಹಾಂತ ಜೋಳಿಗೆ ಕಾರ್ಯಕ್ರಮ ಅತ್ಯಂತ ವಿಶಿಷ್ಟವಾದುದು. ಕುಡಿತದ ಚಟದಿಂದ ಪರಿಶಿಷ್ಟ ಜಾತಿಯ ಯುವಕನೊಬ್ಬ ನಿಧನ ಹೊಂದಿದ ಸುದ್ದಿ ಕೇಳಿ ಅವನ ಕೇರಿಗೆ ಸಾಂತ್ವನ ಹೇಳಲು ತೆರಳಿದ್ದ ಸ್ವಾಮಿಗಳಿಗೆ ಆತನ ಪತ್ನಿ ಮತ್ತು ಮಕ್ಕಳು ಉಪವಾಸದಿಂದ ದು:ಖಿಸುವುದನ್ನು ಕಂಡರು. ಇಂತಹ ಸಾವಿರಾರು ಕುಟುಂಬಗಳ ಕುಡಿತ ಮತ್ತು ಇತರೇ ದುಶ್ಚಟಗಳಿಂದ ಹಾಳಾಗಿರುವುದನ್ನು ಅರಿತು ಇಂತಹ ದುಶ್ಚಟಗಳಿಗೆ ಒಳಗಾಗಿರುವವನ್ನು ಮುಕ್ತಿಗೊಳಿಸುವ ಉದ್ದೇಶದಿಂದ ಮಹಾಂತ ಜೋಳಿಗೆ ಯೋಜನೆ ಆರಂಭಿಸಿದರು ಎಂದರು.
ಈ ಸಂದರ್ಭದಲ್ಲಿ ಭೀಮರಾವ, ರಮೇಶ್,ಫಿರೋಜ್ ಖಾನ, ಪೂಜಾ,ಮಹಾದೇವಿ, ಸಿದ್ದಮ್ಮ,ಕಾವ್ಯ ಶ್ರೀ, ಅಶ್ವಿನಿ, ಶಿಲ್ಪಾ, ಶೀಲಾವತಿ ಇತರರಿದ್ದರು.