ಪ್ರತಿಯೊಬ್ಬರೂ ಪ್ರೀತಿ,ವಿಶ್ವಾಸ,ಸಹಬಾಳ್ವೆಯಿಂದ ಜೀವನ ಸಾಗಿಸಬೇಕುಃಯು.ಟಿ.ಖಾದರ್
ಬಸವನಬಾಗೇವಾಡಿ, ಸೆ. ೩೦: ದೇಶದ ಸಂವಿಧಾನವು ಎಲ್ಲ ಸಮಸ್ಯೆಗಳಿಗೆ, ಜನರ ನೋವುಗಳಿಗೆ ಸರಿಪಡಿಸುವ ಶಕ್ತಿಯಿದೆ. ದೇಶದ ಸಂವಿಧಾನವನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಎಲ್ಲರದಾಗಿದೆ. ಪ್ರತಿಯೊಬ್ಬರೂ ಕಾನೂನುಗಳನ್ನು ಪಾಲಿಸುವ ಮೂಲಕ ದೇಶದಲ್ಲಿ ಎಲ್ಲರೂ ಪ್ರೀತಿ, ವಿಶ್ವಾಸ,ಸಹಬಾಳ್ವೆಯೊಂದಿಗೆ ಜೀವನ ಮಾಡಿದರೆ ಸಮಾಜದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಪಟ್ಟಣದ ಬಸವ ಭವನದಲ್ಲಿ ತಾಜ್ ಸೋಸಿಯಲ್ ಗ್ರುಫ್ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಸೌಹಾರ್ದ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ವಾಸಿಸುವ ಎಲ್ಲ ಜನರು ಸಹೋದರತೆ, ಸಹಬಾಳ್ವೆ, ಮಾನವೀಯತೆ ಮೌಲ್ಯ ಗುಣಗಳನ್ನು ಅಳವಡಿಸಿಕೊಂಡು ಜೀವನ ಮಾಡುವಂತಾಗಬೇಕು. ಸೌಹಾರ್ದ ಸಮಾವೇಶಗಳಿಂದ ಇಂತಹ ಗುಣಗಳನ್ನು ಮೈಗೂಡಿಸಿಕೊಂಡರೆ ಸಮಾವೇಶ ಮಾಡಿದ್ದು ಸಾರ್ಥಕವಾಗುತ್ತದೆ. ಸಮಾಜಕ್ಕೆ ಯಾವುದೇ ಕಂಟಕವಾಗದ ರೀತಿಯಲ್ಲಿ ಜೀವನ ಮಾಡಬೇಕು. ಸಮಾಜಕ್ಕೆ ಪೂರಕವಾದ ಜೀವನ ಮಾಡಿದರೆ ಸಮಾಜದಲ್ಲಿ ಯಾವುದೇ ಕಂಟಕಗಳು ಬಾರದೇ ಎಲ್ಲರೂ ಸೌಹಾರ್ದತೆಯಿಂದ ಇರಲು ಸಾಧ್ಯವಿದೆ ಎಂದರು.
ನಾವೆಲ್ಲರೂ ಒಗ್ಗೂಟ್ಟಿದ್ದರೆ ದೇಶ ಉಳಿಯಲು ಸಾಧ್ಯ. ಎಲ್ಲರೂ ಕಾನೂನು ಪಾಲಿಸುವದು ಬಹುಮುಖ್ಯವಾಗಿದೆ. ಪರಸ್ಪರ ಅರ್ಥ ಮಾಡಿಕೊಂಡು ಸಾಗಬೇಕು. ಸುಂದರ ಸಮಾಜಕ್ಕೆ ನಮ್ಮಲ್ಲಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳುವದು ತುಂಬಾ ಅಗತ್ಯವಿದೆ. ನಾವೆಲ್ಲರೂ ಒಂದೇ ತಾಯಿ ಮಕ್ಕಳಿದ್ದಂತೆ. ಎಲ್ಲರೂ ಸೇರಿ ದೇಶವನ್ನು ಇನ್ನಷ್ಟು ಬಲಿಷ್ಠ ಮಾಡೋಣವೆಂದರು.
ಕೆಪಿಸಿಸಿ ವಕ್ತಾರ ನಿಕಿತರಾಜ ಮೌರ್ಯ ಮಾತನಾಡಿ, ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕಾರ್ಯ ನಡೆಯಬಾರದು. ದ್ವೇಷದಿಂದ ದ್ವೇಷ ಮಾಡಿದರೆ ಎಂದಿಗೂ ಸಮಸ್ಯೆ ಪರಿಹಾರ ಕಾಣುವುದಿಲ್ಲ. ಪ್ರೀತಿ,ವಿಶ್ವಾಸ ಬಹು ಮುಖ್ಯವಾಗಿದೆ ಎಂದರು.
ಕರ್ನಾಟಕ ಯುನಿಪ ಅಧ್ಯಕ್ಷ ರಫೀಕ್ ಕುದ್ರೋಳಿ ಮಾತನಾಡಿ, ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯುವದು ತುಂಬಾ ಖಂಡನೀಯ. ಅಧರ್ಮಿಯರನ್ನು ಸೋಲಿಸಲು ಧರ್ಮಿಯರು ನಿರಂತರವಾಗಿ ಹೋರಾಟ ಮಾಡಿರುವದನ್ನು ಎಲ್ಲ ಧರ್ಮದ ಗ್ರಂಥಗಳಿAದ ತಿಳಿದುಕೊಳ್ಳುತ್ತೇವೆ. ಜಿಹಾದ್ ಎಂಬುವದು ಪವಿತ್ರ ಪದವಾಗಿದೆ. ಇದು ಕುರಾನ್ದಲ್ಲಿ ಇಲ್ಲವೇ ಇಲ್ಲ. ಇದರ ಬಗ್ಗೆ ಕೆಲವರು ವಿನಾಕಾರಣ ಗೊಂದಲ ಸೃಷ್ಟಿಸಿ ಸಮಾಜದಲ್ಲಿ ಕಂದಕ ಮೂಡಿಸುತ್ತಿರುವುದು ವಿಷಾದನೀಯ ಎಂದರು.
ಸಾನಿಧ್ಯ ವಹಿಸಿದ್ದ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಮಾತನಾಡಿ,ಮಾತುಗಳು ಭಾಷಣವಾಗದೇ ಅದು ಸಾಧನೆಯಾಗಬೇಕು. ಕೆಲವರ ಮಾತಿನಿಂದ ಸಮಾಜದಲ್ಲಿ ಅಹಿತಕರ ಘಟನೆಗಳು ಸಂಭವಿಸುತ್ತವೆ. ಒಳ್ಳೆಯ ಸಂದೇಶಗಳನ್ನು ಅರಿತುಕೊಂಡು ಜೀವನ ಮಾಡಿದರೆ ಬದುಕಿಗೆ ಒಂದು ಅರ್ಥ ಬರಲು ಸಾಧ್ಯ ಎಂದರು.
ನAದಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಸತ್ಯಜೀತ ಪಾಟೀಲ, ಸಾನಿಧ್ಯ ವಹಿಸಿದ್ದ ಶಿರೂರಿನ ಡಾ.ಬಸವಲಿಂಗ ಸ್ವಾಮೀಜಿ ಮಾತನಾಡಿದರು.
ವೇದಿಕೆಯಲ್ಲಿ ಹಾಫೀಜ ಮಹ್ಮದಅಲಿ ಮಿಲಿ, ಐ.ಸಿ.ಪಟ್ಟಣಶೆಟ್ಟಿ, ಸುರೇಶ ಹಾರಿವಾಳ, ಚಂದ್ರಶೇಖರಗೌಡ ಪಾಟೀಲ, ಎಂ.ಕೆ.ಬಿರಾದಾರ, ಮುಕ್ತಿಅಬ್ದುಲ ಅಜೀಜ್ ಇತರರು ಇದ್ದರು. ಫಯಾಜ್ ಅವಟಿ ಸ್ವಾಗತಿಸಿದರು. ನಜೀರ ದಡ್ಡಿ ನಿರೂಪಿಸಿದರು. ರೆಹಾನ್ ಕೆರೂರ ವಂದಿಸಿದರು.