345 ಪೌರ ಕಾರ್ಮಿಕರ ಸೇವೆ ಖಾಯಂಗೆ ಉಗ್ರ ಹೋರಾಟ : ಹೊಸಮನಿ
ಕಲಬುರಗಿ:ಸೆ.29:ಮಹಾನಗರ ಪಾಲಿಕೆಯಲ್ಲಿ 444 ನೇರ ಖಾಯಂಮಾತಿ ಖಾಲಿ ಇದ್ದು, ಆ ಸ್ಥಳದಲ್ಲಿ 345 ಪೌರ ಕಾರ್ಮಿಕರನ್ನು ಖಾಯಂಮಾತಿಯಾಗಿ ನೇಮಕ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಗುಲಬರ್ಗಾ ಮಹಾನಗರ ಸಭೆ ಪೌರ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ ಜಿ. ಹೊಸಮನಿ ಅವರು ಎಚ್ಚರಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 245 ಪೌರ ಕಾರ್ಮಿಕರ ಖಾಯಂಮಾತಿಗಾಗಿ ಉಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅರ್ಜಿಯ ದಾವೆಯಲ್ಲಿರುತ್ತದೆ. 345 ಜನರಿಗೆ ಖಾಯಂಮಾತಿ ಮಾಡಿಕೊಂಡರೆ ನಾವು ಪ್ರಕರಣಗಳನ್ನು ಹಿಂಪಡೆಯುತ್ತೇವೆ. ಒಂದು ವೇಳೆ ಖಾಯಂಗೊಳಿಸದೇ ಹೋದಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದರು.
ಕಳೆದ 2017-2019ರಲ್ಲಿ ಪೌರ ಕಾರ್ಮಿಕರ ಖಾಯಂ ನೇರ ನೇಮಕಾತಿ ಅರ್ಜಿಯನ್ನು ಸಲ್ಲಿಸಿದ್ದೇವೆ. ಕಳೆದ 2021ರ ಏಪ್ರಿಲ್ 6ರಲ್ಲಿ ಖಾಯಂ ನೇರ ನೇಮಕಾತಿಯಲ್ಲಿ ನಮ್ಮ ಸೇವಾ ಹಿರಿತನ ಪರಿಗಣಿಸದೇ ನಮ್ಮ ಅರ್ಜಿಗಳನ್ನು ತಿರಸ್ಕರಿಸಿರುತ್ತಾರೆ. ನೇರ ನೇಮಕಾತಿ ಅರ್ಜಿಯಲ್ಲಿ ಪೌರ ಕಾರ್ಮಿಕರನ್ನು ಆಯ್ಕೆ ಮಾಡುವ ನಿಯಮದಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ, ದಿನಗೂಲಿ ಪೌರ ಕಾರ್ಮಿಕರು, ಕ್ಷೇಮಾಭಿವೃದ್ಧಿ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವವರನ್ನು ಮೊದಲು ಆದ್ಯತೆ ಇದೆ ಎಂದು ಅವರು ಹೇಳಿದರು.
ಕಳೆದ 1994ರಿಂದ 2024ರವರೆಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರನ್ನು ಆಯ್ಕೆ ಮಾಡಬೇಕು. 2007ರಿಂದ 2010ರವರೆಗೆ ಉಚ್ಛ ನ್ಯಾಯಾಲಯದಿಂದ ದಿನಗೂಲಿ ಪೌರ ಕಾರ್ಮಿಕರೆಂದು ಆದೇಶ ನೀಡಿದ್ದಾರೆ. ನಮ್ಮ ಸೇವಾ ಹಿರಿತನವನ್ನು ಪರಿಗಣಿಸದೇ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವುದನ್ನು ಆಯ್ಕೆ ಮಾಡಿದ್ದಾರೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
468 ಜನ ಕಾರ್ಮಿಕ ಇಲಾಖೆಯ ಪ್ರಕಾರ ದೃಢೀಕರಣವಾಗಿದ್ದು, ಉಚ್ಛ ನ್ಯಾಯಾಲಯದಲ್ಲಿ ಖಾಯಂಮಾತಿಗಾಗಿ ಅರ್ಜಿ ಸಲ್ಲಿಸಿದ್ದು 2021-2022ರಂದು ಒಟ್ಟು 345 ಪೌರ ಕಾರ್ಮಿಕರು ಅರ್ಜಿ ಸಲ್ಲಿಸಿದ್ದಾರೆ. ಸದ್ಯಕ್ಕೆ 333 ಜನ ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. 50 ತಿಂಗಳ ಬಾಕಿ ವೇತನವನ್ನು 380 ಜನ ಕಾರ್ಮಿಕರಿಗೆ ಕೊಡುವಂತೆ ಕಳೆದ 2023ರ ಸೆಪ್ಟೆಂಬರ್ 29ರಂದು ಆದೇಶವಾಗಿದೆ. 2024ರ ಆಗಸ್ಟ್‍ದಿಂದ ಜನವರಿ 2017ರ ಅವಧಿಯಲ್ಲಿ 27 ತಿಂಗಳು ವೇತನ ಬಾಕಿ ಇದೆ. 1994ರಿಂದ 2024ರವರೆಗೆ ಅಂದಾಜು 97 ಪೌರ ಕಾರ್ಮಿಕರು ಮರಣಹೊಂದಿದ್ದಾರೆ ಎಂದು ಅವರು ಹೇಳಿದರು.
ಈಗ 44 ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. 345 ಪೌರ ಕಾರ್ಮಿಕರು ಖಾಯಂಮಾತಿಗಾಗಿ ಉಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದ ಅವರು, ಪೌರ ಕಾರ್ಮಿಕರ ತಾತ್ಕಾಲಿಕ ಆಯ್ಕೆ ಪಟ್ಟಿ ತಪ್ಪು ಅಂಶಗಳಿಂದ, ಕರ್ತವ್ಯ ಲೋಪದಿಂದ ಸಿದ್ಧಪಡಿಸಿದ್ದು, ಆಯ್ಕೆ ಪಟ್ಟಿಗೆ ಉಚ್ಛನ್ಯಾಯಾಲಯದ ಕಲಬುರ್ಗಿ ಪೀಠವು, ತಡೆಯಾಜ್ಞೆ ನೀಡಿದೆ ಎಂದು ಅವರು ತಿಳಿಸಿದರು.
ಕಳೆದ 2021ರ ಜುಲೈ 28ರಂದು ಪ್ರಾದೇಶಿಕ ಆಯುಕ್ತರು 132 ಜನ ತಾತ್ಕಾಲಿಕ ಪೌರ ಕಾರ್ಮಿಕರ ಹೆಸರು ಆಯ್ಕೆ ಪಟ್ಟಿಯಿಂದ ರದ್ದುಪಡಿಸಲು ಬೆಂಗಳೂರಿನ ಪೌರಾಡಳಿತ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಆದಾಗ್ಯೂ, ಕೂಡ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು, 2021ರಲ್ಲಿ ನೇರ ನೇಮಕಾತಿ ಆಯ್ಕೆಯಾಗಿರುವ 132 ಪೌರ ಕಾರ್ಮಿರನ್ನು ಆಯ್ಕೆ ಪಟ್ಟಿಯಲ್ಲಿರುವ ಹೆಸರು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷೆ ಭಾರತಿಬಾಯಿ ಎಸ್. ಹತ್ತರಕಿ, ಭೀಮ್ ಆರ್ಮಿ ಭಾರತ ಏಕತಾ ಮಿಷನ್ ರಾಜ್ಯಾಧ್ಯಕ್ಷ ಎಸ್.ಎಸ್. ತಾವಡೆ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ದಿಗಂಬರ್ ಬೆಳಮಗಿ, ಪೌರ ಕಾರ್ಮಿಕರಾದ ಶಿವಕುಮಾರ್ ಎಂ. ಮುಡ್ಡಿ, ತಿಮ್ಮಣ್ಣ ಸಿ. ಬಳಿಚಕ್ರ, ರಾಣೋಜಿ ಎಸ್. ಓಮನಕರ್ ಮುಂತಾದವರು ಉಪಸ್ಥಿತರಿದ್ದರು.