ಪಕ್ಷಾತೀತವಾಗಿ ಗಣೇಶೋತ್ಸವ ಆಚರಣೆ ಮಾಡಲು ಕರೆ
ಸಂಜೆವಾಣಿ ವಾರ್ತೆ
ದಾವಣಗೆರೆ.2: ನಗರದ ಹಿಂದೂ ಮಹಾಗಣಪತಿ ಟ್ರಸ್ಟ್ ವತಿಯಿಂದ 7ನೇ ವರ್ಷದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಅಂಗವಾಗಿ ಧ್ವಜಸ್ತಂಭದ ಪೂಜಾ ಕಾರ್ಯವನ್ನು  ನಗರದ ಹೈಸ್ಕೂಲ್ ಮೈದಾನದಲ್ಲಿ ನೆರವೇರಿಸಲಾಯಿತು.ದಾವಣಗೆರೆ ದಕ್ಷಿಣ ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜೆ ನೆರವೇರಿಸಿದರು.ಇದೇ ವೇಳೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ರಾಜ್ಯದಲ್ಲಿ ಒಳ್ಳೆಯ ಮಳೆಯಾಗಿದ್ದು, ರೈತರಿಗೆ ಸೂಕ್ತ ವಾತಾವರಣವಿದೆ. ಇಂತಹ ಸಂದರ್ಭದಲ್ಲಿ ಬಂದಿರುವ ಗಣೇಶ ಮಹೋತ್ಸವವನ್ನು ಎಲ್ಲರೂ ಪಕ್ಷಾತೀತವಾಗಿ ಸೇರಿ ಆಚರಿಸಿ ಯಶಸ್ವಿಗೊಳಿಸೋಣ ಎಂದು ಹಾರೈಸಿದರು.ಟ್ರಸ್ಟ್ ಅಧ್ಯಕ್ಷ ಗುರು ಜೊಳ್ಳಿ ಮಾತನಾಡಿ, ಹಿಂದೂ ಮಹಾಗಣಪತಿ ಟ್ರಸ್ಟ್ ವತಿಯಿಂದ ನಗರದಲ್ಲಿ 7ನೇ ವರ್ಷ ಸಾರ್ವಜನಿಕ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಮಂಟಪ ನಿರ್ಮಾಣಕ್ಕೆ ಇಂದು ಭೂಮಿಪೂಜೆ ನೆರವೇರಿಸಲಾಗಿದೆ. ಈ ಬಾರಿ ವಿಶೇಷವಾಗಿ ಕಾಶಿ ವಿಶ್ವನಾಥ ಕಾರಿಡಾರ್ ಮಾದರಿಯಲ್ಲಿ ಗಣಪತಿ ಮಂಟಪ ನಿರ್ಮಿಸಲಾಗುವುದು. 100*200 ಅಡಿ ಅಳತೆಯ ಪೆಂಡಾಲ್ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಕೊಲ್ಕತ್ತಾದಿಂದ ಕಲಾವಿದರು ಆಗಮಿಸುತ್ತಿದ್ದು, ಗುರುವಾರದಿಂದ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.ಕರ್ನಾಟಕದ ಸಾಕಷ್ಟು ತೀರ್ಥಕ್ಷೇತ್ರಗಳನ್ನು ಜನ ನೋಡಿರುತ್ತಾರೆ. ಆದರೆ ಉತ್ತರ ಭಾರತದಲ್ಲಿರುವ ಕ್ಷೇತ್ರಗಳಿಗೆ ಸಾಮಾನ್ಯ ಜನರು ಭೇಟಿ ನೀಡುವುದು ಕಷ್ಟ. ಹಾಗಾಗಿ ಉತ್ತರ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿರುವ ದೇವಸ್ಥಾನಗಳ ಮಾದರಿಯಲ್ಲಿ ಪ್ರತಿವರ್ಷ ಗಣಪತಿ ಮಂಟಪ ನಿರ್ಮಿಸಲಾಗುತ್ತಿದೆ. ಅಷ್ಟು ದೂರಕ್ಕೆ ಹೋಗಲಾಗದ ದಾವಣಗೆರೆ ಹಾಗೂ ಸುತ್ತಮುತ್ತಲಿನ ಜನರು ಇಲ್ಲಿಯೇ ಅಂತಹ ಕ್ಷೇತ್ರಗಳನ್ನು ಕಣ್ತುಂಬಿಕೊAಡು ಪುನೀತರಾಗಲಿ ಎಂಬುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.