ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಮುಖ್ಯ
ಸಂಜೆವಾಣಿ ವಾರ್ತೆ
ಚಳ್ಳಕೆರೆ.2: ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಹಿರಿದಾದುದು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು. ಅವರು ತಾಲೂಕಿನ ಸಾಣೀಕೆರೆ ಕ್ಲಸ್ಟರ್ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ಶುಕ್ರವಾರ ಆಯೋಜಿಸಿದ್ದ ಶೈಕ್ಷಣಿಕ ಚಟುವಟಿಕೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಶಿಕ್ಷಕರು ಬದ್ಧತೆಯಿಂದ ಕೆಲಸ ನಿರ್ವಹಿಸಬೇಕು. ಪ್ರತಿ ಮಗುವಿನ  ಕಲಿಕಾ ಸಾಮರ್ಥ್ಯ ಗುರುತಿಸಿಕೊಂಡು ಮಾರ್ಗದರ್ಶನ ಮಾಡಬೇಕು. ಶೈಕ್ಷಣಿಕ ಚಟುವಟಿಕೆಗಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಮಕ್ಕಳಿಗೆ ತಲುಪಿಸಬೇಕು. ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದAತೆ ಶಿಕ್ಷಕರು ಗಮನ ನೀಡಿ ಮಕ್ಕಳನ್ನು ಮುಖ್ಯವಾಹಿನಿಗೆ ತಂದು ಗುಣಾತ್ಮಕ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಸಾಕಷ್ಟು ಹಣ ವಿನಿಯೋಗಿಸುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ನಾವೆಲ್ಲರೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಶ್ರಮಿಸಬೇಕು. ಶಿಕ್ಷಕರು ತಮ್ಮ ವೃತ್ತಿಯಲ್ಲಿ ಆತ್ಮಾವಲೋಕನ ಮಾಡಿಕೊಂಡು ಮಕ್ಕಳ ಕಲಿಕಾ ಪ್ರಗತಿಯನ್ನು ಹೆಚ್ಚಿಸಬೇಕು. ಡಯಟ್ ವತಿಯಿಂದ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಸಾಣಿಕೆರೆ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಶೀಲಿಸಿ ಕಲಿಕಾ ಪ್ರಗತಿ ಕುರಿತು ಮಾರ್ಗದರ್ಶನ ನೀಡಿದ್ದಾರೆ. ಎಲ್ಲಾ ಶಿಕ್ಷಕರು ಮಾರ್ಗದರ್ಶನದಲ್ಲಿ ತಿಳಿಸಿದ ಅಂಶಗಳನ್ನು ಗಮನಿಸಿ ಕಲಿಕೆ ಸಾಮರ್ಥ್ಯದಲ್ಲಿ ಹಿಂದುಳಿದಿರುವ ಮಕ್ಕಳಿಗೆ ಸೂಕ್ತ ಚಟುವಟಕೆಗಳನ್ನು ಬಳಸಿ ಕಲಿಕಾ ಸಾಮರ್ಥ್ಯ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು. ಡಯಟ್‌ನ ಉಪ ಪ್ರಾಚಾರ್ಯ ಅಶ್ವಥ್ ನಾರಾಯಣ, ಹಿರಿಯ ಉಪನ್ಯಾಸಕರಾದ ಎಸ್.ಜ್ಞಾನೇಶ್ವರ, ತಿಪ್ಪೇಸ್ವಾಮಿ, ಉಪನ್ಯಾಸಕರಾದ ಆರ್.ನಾಗರಾಜು, ಎನ್.ರಾಘವೇಂದ್ರ, ಕೆ.ಜಿ.ಪ್ರಶಾಂತ್, ಎಸ್.ಬಸವರಾಜು, ಯು.ಸಿದ್ದೇಶಿ, ಸಿ.ಎಸ್.ಲೀಲಾವತಿ, ಶಿವಲೀಲಾ, ನಿತ್ಯಾನಂದ, ರಂಗಸ್ವಾಮಿ, ಬಿ.ಆರ್.ಸಿ ತಿಪ್ಪೇಸ್ವಾಮಿ, ಬಿ.ಆರ್.ಪಿ ಜಗದೀಶ್, ಸಿ.ಆರ್.ಪಿ ಮಹಂತೇಶ್, ರಘು, ಪ್ರಸನ್ನ, ನಾಗರಾಜು, ಪ್ರಕಾಶ್, ವಿಜಯಕುಮಾರಿ ಮತ್ತು ಮುಖ್ಯ ಶಿಕ್ಷಕರು ಇದ್ದರು.