ಸಂಯಮ ಹಾಗೂ ಅರಿವು ಬೆಳಸಿಕೊಳ್ಳುವ ಮೂಲಕ ದುಶ್ಚಟಗಳಿಂದ ದೂರವಿರಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಆ.೨; ಹಿಂದಿನ ದಿನಮಾನಗಳಲ್ಲಿ ದುಶ್ಚಟ ಎಂದರೆ ಕುಡಿತ, ಬೀಡಿ, ಸಿಗರೇಟ್, ಗುಟುಕಾ ಸೇವನೆಗೆ ಸೀಮಿತವಾಗಿತ್ತು. ಪ್ರಸ್ತುತ ದುಶ್ಚಟಗಳ ವ್ಯಾಪ್ತಿ ಎಲ್ಲಿ ಮೀರಿ ಹೋಗುತ್ತಿದೆ. ವಯಸ್ಸಿನ ಭೇದ ಭಾವಗಳಿಲ್ಲದೆ ಪ್ರತಿಯೊಬ್ಬರು ಸಂಯಮ ಹಾಗೂ ಅರಿವು ಬೆಳಸಿಕೊಳ್ಳುವ ಮೂಲಕ ದುಷ್ಚಟಗಳಿಂದ ದೂರವಿರುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಕರೆ ನೀಡಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ, ಶಿಕ್ಷಣ ಇಲಾಖೆ, ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ  ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.ಯುವಜನತೆ ಮಾದಕ ವ್ಯಸನಗಳ ಕಡೆ ಆಕರ್ಷಣೆಯಾ ಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ವ್ಯಸನಗಳು ಮನುಷ್ಯನ ಜೀವನ ಹಾಳು ಮಾಡುವುದರ ಜೊತೆಗೆ, ಕುಟುಂಬ ಹಾಗೂ ಸಮಾಜದ ವ್ಯವಸ್ಥೆಯನ್ನು ಸಹ ಹಾಳುಗೆಡವುತ್ತವೆ. ಡಾ.ಮಹಾಂತ ಶಿವಯೋಗಿ ಸ್ವಾಮೀಜಿಗಳು ಮಹಾಂತ ಜೋಳಿಗೆ ಎಂಬ ಕಲ್ಪನೆ ರೂಪಿಸಿ, ದೇಶ ವಿದೇಶಗಳಲ್ಲಿ ಸಂಚರಿಸಿ, ಜನರ ದುಶ್ಚಟಗಳನ್ನು ತಮ್ಮ ಜೋಳಿಗೆ ತುಂಬಿಸಿಕೊAಡು ವ್ಯಸನಮುಕ್ತರನ್ನಾಗಿಸಿ ಜನರ ಜೀವನ ಹಸನು ಮಾಡಿದರು. ಪ್ರತಿ ಮಕ್ಕಳಿಗೂ ಮನೆಯೇ ಮೊದಲ ಪಾಠಶಾಲೆ. ಮನೆಯಲ್ಲಿ ಹಿರಿಯರನ್ನು ನೋಡಿ ಮಕ್ಕಳು ಕಲಿಯುತ್ತಾರೆ. ಹಿರಿಯರಲ್ಲಿ ದುಶ್ಚಟಗಳಿದ್ದರೆ, ಮಕ್ಕಳು ದುಪಟ್ಟು ದುಶ್ಚಟ ಮಾಡುತ್ತಾರೆ. ಶಾಲೆಯಲ್ಲಿ ಪಾಠ ಹೇಳುವ ಗುರುಗಳೇ ದುಶ್ಚಟಗಳ ದಾಸರಾದರೆ, ಮಕ್ಕಳಿಗೆ ದುಶ್ಚಟಗಳಿಂದ ದೂರ ಇರಿ ಎಂದು ಹೇಳುವ ನೈತಿಕತೆ ಕಳೆದುಕೊಳ್ಳಬೇಕಾಗುತ್ತದೆ.