ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರಕ್ಕೆ
ಸಂಜೆವಾಣಿ ವಾರ್ತೆ
ಶಿವಮೊಗ್ಗ, ಜು.೨: ರಾಜ್ಯದ ಪ್ರಮುಖ ಜಲ ವಿದ್ಯುತ್  ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯದಿಂದ ಗುರುವಾರ ನೀರು ಹೊರ ಹರಿಸಲಾಗುತ್ತಿದೆ.ಆಗಸ್ಟ್ 1 ರ ಗುರುವಾರ ಡ್ಯಾಂನ ನೀರಿನ ಮಟ್ಟ 1814 ಅಡಿ ತಲುಪುತ್ತಿದ್ದಂತೆ (ಗರಿಷ್ಠ ಮಟ್ಟ : 1819), ಬೆಳಿಗ್ಗೆ ಮೂರು ಕ್ರಸ್ಟ್ ಗೇಟ್ ಗಳನ್ನು ತೆರೆದು ಸುಮಾರು 10 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಯಿತು. ಪ್ರಸ್ತುತ ಡ್ಯಾಂನ ಒಳಹರಿವು 53,061 ಕ್ಯೂಸೆಕ್ ಇದೆ.ಡ್ಯಾಂ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಭಾರೀ ಪ್ರಮಾಣದ ಒಳಹರಿವು ಇರುವುದರಿಂದ ಡ್ಯಾಂ ಗರಿಷ್ಠ ಮಟ್ಟ ತಲುಪುದಕ್ಕೂ ಮುನ್ನವೇ ನೀರು ಹರಿಸುವ ನಿರ್ಧಾರ ಕೈಗೊಳ್ಳಲಾಗಿದೆ.  ಡ್ಯಾಂನಿಂದ ನೀರು ಹೊರ ಹರಿಸುವ ಮಾಹಿತಿ ತಿಳಿದ ನೂರಾರು ಸಾರ್ವಜನಿಕರು, ಜಲಧಾರೆ ವೀಕ್ಷಣೆಗೆ ಆಗಮಿಸಿದ್ದರು. ಡ್ಯಾಂನಿಂದ ನೀರು ಹೊರ ಬಿಡುತ್ತಿದ್ದಂತೆ ಚಪ್ಪಾಳೆ ತಟ್ಟಿ ಹರ್ಷೋದ್ಘಾರ ವ್ಯಕ್ತಪಡಿಸಿದರು.ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಬಿದ್ದ ಉತ್ತಮ ಮಳೆಯಿಂದ ಲಿಂಗನಮಕ್ಕಿ ಡ್ಯಾಂ ಗರಿಷ್ಠ ಮಟ್ಟಕ್ಕೆ ಬರುವಂತಾಗಿದೆ.ಲಿಂಗಮನಕ್ಕಿ ಡ್ಯಾಂನಿಂದ ನೀರು ಹೊರಬಿಡುತ್ತಿರುವ ಕಾರಣದಿಂದ ಅಣೆಕಟ್ಟೆಯ ಕೆಳದಂಡೆಯ ಶರಾವತಿ ನದಿ ಪಾತ್ರದ ನಿವಾಸಿಗಳಿಗೆ ಈಗಾಗಲೇ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ.ಲಿಂಗನಮಕ್ಕಿ ಜಲಾಶಯವು ಸಾಗರ ತಾಲೂಕಿನಲ್ಲಿದೆ. ಶರಾವತಿ ನದಿಗೆ ಅಣೆಕಟ್ಟು ನಿರ್ಮಿಸಲಾಗಿದೆ. 151. 52 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ದೇಶದಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಪ್ರಮುಖ ಜಲಾಶಯವಾಗಿದೆ.