ಬಾಳಿನ ಭಾಗ್ಯೋದಯಕ್ಕೆ  ಧರ್ಮದ ಬೆಳಕು ಬೇಕು : ಶ್ರೀ ರಂಭಾಪುರಿ ಜಗದ್ಗುರುಗಳು
ಸಂಜೆವಾಣಿ ವಾರ್ತೆ
ದಾವಣಗೆರೆ- ಆ.೨;ಬಿತ್ತಿದ ಬೀಜಕ್ಕೆ ನೀರು ಗೊಬ್ಬರ ಹೇಗೆ ಅವಶ್ಯಕವೋ ಹಾಗೆಯೇ ನೀತಿಗೆ ಧರ್ಮವೂ ಅಷ್ಟೇ ಅವಶ್ಯಕ. ಪರಿಶುದ್ಧವಾದ ಜೀವನ ರೂಪಿತಗೊಳ್ಳಲು ಧರ್ಮ ಪ್ರಜ್ಞೆ ಅವಶ್ಯಕ. ಬಾಳಿನ ಭಾಗ್ಯೋದಯಕ್ಕೆ ಧರ್ಮದ ಬೆಳಕು ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು ಗುರುವಾರ ನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಭವನದಲ್ಲಿ ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆಯವರು ಸಂಘಟಿಸಿದ್ದ ಜನಜಾಗೃತಿ ಧರ್ಮ ಸಮಾವೇಶದ ೩ನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಭಗವಂತನಿತ್ತ ಸಂಪತ್ತು ನಿಜವಾದ ಬಾಳಿನ ಸಂಪತ್ತು. ಭಕ್ತ ಭಗವಂತನೆಡೆಗೆ ಹೋದಾಗ ಜೀವನ ಪಾವನ ಪುನೀತ. ದೇವರ ಮೇಲಿನ ನಂಬಿಕೆ ಮನುಷ್ಯನ ಬಾಳಿಗೆ ಶಾಶ್ವತ ನಂದಾದೀಪ. ದೇವರು ಎಲ್ಲರಲ್ಲೂ ಇರುವನು. ಆದರೆ ಎಲ್ಲರೂ ದೇವರಲ್ಲಿ ಇಲ್ಲ. ಶ್ರಮದ ಕಾಯಕದಿಂದಲೇ ಚೈತನ್ಯ ಪ್ರಾಪ್ತಿಯಾಗುತ್ತದೆ. ಕ್ರಿಯಾಶೀಲ ಬದುಕು ಶ್ರೇಯಸ್ಸಿಗೆ ಕಾರಣ. ಬದುಕಿನ ಹಿರಿಮೆ ರಹಸ್ಯ ಬೋಧಿಸುವುದೇ ನಿಜವಾದ ಧರ್ಮ. ಉದಾತ್ತ ಜೀವನ ಮೌಲ್ಯಗಳನ್ನು ಸಂಪಾದಿಸಿಕೊAಡು ಬಾಳಬೇಕೆಂದು ವೀರಶೈವ ಧರ್ಮ ನಿರೂಪಿಸಿದೆ. ಧರ್ಮ ಮತ್ತು ದರ್ಶನಗಳ ಅರಿವು ಪ್ರಾಪ್ತಿಯಾಗಲು ಶ್ರೀ ಗುರುವಿನ ಬೋಧಾಮೃತ ಅವಶ್ಯಕ. ಸತ್ಯ ಶುದ್ಧವಾದ ತತ್ವ ಸಿದ್ಧಾಂತಗಳನ್ನು ಬೋಧಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ಚಿಂತನೆಗಳನ್ನು ಅರಿತುಕೊಂಡು ಬಾಳಬೇಕೆಂದರು.