ಭದ್ರಾ ಅಣೆಕಟ್ಟೆಯ ಮುಖ್ಯ ಕಾಲುವೆ, ಗೇಟ್‌ ದುರಸ್ಥಿಪಡಿಸಲು‌ ಒತ್ತಾಯಿಸಿ ಮನವಿ
ಸಂಜೆವಾಣಿ ವಾರ್ತೆ
ದಾವಣಗೆರೆ, ಆ.2; ಭದ್ರಾ ಅಣೆಕಟ್ಟೆಯ ಮುಖ್ಯ ಕಾಲುವೆ, ಗೇಟ್‌ಗಳನ್ನು ದುರಸ್ಥಿಪಡಿಸಿ, ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕವಾಗಿ ನೀರು ಪೂರೈಸಲು ಕ್ರಮ ಕೈಗೊಳ್ಳುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದಿಂದ ನಗರದಲ್ಲಿ ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಅರ್ಪಿಸಲಾಯಿತು. ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ಸಂಘದ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ ಇತರರ ನೇತೃತ್ವದಲ್ಲಿ ಮನವಿ ಅರ್ಪಿಸಿ, ತಾಲೂಕಿನ ಕುರ್ಕಿ ಕಾಲುವೆಯಿಂದ ಮತ್ತಪ್ಪನ ಕ್ಯಾಂಪ್‌ವರೆಗೂ ಭದ್ರಾ ನಾಲೆಯಲ್ಲಿ ತುಂಬಿರುವ ಹೂಳು ತೆಗೆಸುವಂತೆ, ಲೋಕಿಕೆರೆ, ಗೋಪನಾಳ್ ಭಾಗದ 3 ಗೇಟ್‌ಗಳನ್ನು ದುರಸ್ಥಿಪಡಿಸುವಂತೆ ಮನವಿ ಮಾಡಲಾಯಿತು.ಇದೇ ವೇಳೆ ಮಾತನಾಡಿದ ಗುಮ್ಮನೂರು ಬಸವರಾಜ, ಭದ್ರಾ ನಾಲೆಯಲ್ಲಿ ಹೂಳು ತುಂಬಿರುವುದು, ಗೇಟ್‌ ಹಾ‍ಳಾಗಿರುವುದರಿಂದ ಹೆಚ್ಚಿನ ನೀರು ಲೋಕಿಕೆರೆ ಭಾಗಕ್ಕೆ ಹೋಗುತ್ತಿದೆ. ಇದರಿಂದಾಗಿ ಕೋಲ್ಕುಂಟೆ ಇತರೆ ಭಾಗದ ಅಚ್ಚುಕಟ್ಟು ರೈತರಿಗೆ ತೊಂದರೆಯಾಗುತ್ತಿದೆ. ಸತತ 2 ವರ್ಷಗಳ ತೀವ್ರ ಬರದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ನಾಲೆಯಲ್ಲೂ ಹೂಳು ತುಂಬಿದ್ದರಿಂದ ನೀರು ಸಹ ಅಚ್ಚುಕಟ್ಟು ಪ್ರದೇಶಕ್ಕೆ ಸರಿಯಾಗಿ ತಲುಪುತ್ತಿಲ್ಲ. ನಿಗದಿತ ಪ್ರಮಾಣದ ನೀರು ಆಯಾ ಭಾಗಕ್ಕೆ ತಲುಪದ ಸ್ಥಿತಿ ಇದೆ ಎಂದು ದೂರಿದರು. ಅಚ್ಚುಕಟ್ಟು ರೈತರು, ರೈತ ಸಂಘಟನೆಗಳು ಸಾಕಷ್ಟು ಸಲ ನೀರಾವರಿ ಇಲಾಖೆ, ಸಂಬಂಧಿಸಿದ ಇಂಜಿನಿಯರ್‌, ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾರೊಬ್ಬರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ತಕ್ಷಣವೇ ನಾಲೆಯಲ್ಲಿ ತುಂಬಿರುವ ಹೂಳು ತೆರವು ಮಾಡಿಸಬೇಕು. ಕುರ್ಕಿಯಿಂದ ಮುತ್ತಪ್ಪನ ಕ್ಯಾಂಪ್‌ನವರೆಗೆ 4 ಪೈಪ್‌ ಹಾಳಾಗಿದ್ದು, ನೀರು ಸೋರಿಕೆ ಯಾಗು ತ್ತಿರುವುದನ್ನು ತಡೆದು ಅಚ್ಚುಕಟ್ಟಿಗೆ ತಲುಪಿಸುವ ಹೊಣೆ ಹೊರಬೇಕು. ತಕ್ಷಣವೇ ಹೊಸದಾಗಿ ಪೈಪ್‌ಲೈನ್ ಅಳವಡಿಸಿಕೊಡಬೇಕು ಎಂದು ಅ‍ವರು ಆಗ್ರಹಿಸಿದರು.